ಈಶ್ವರಪ್ಪ ಪಿಎ ಅಪಹರಣ ಯತ್ನ, ಎನ್.ಆರ್.ಸಂತೋಷ್ ವಿಚಾರಣೆ
ಬೆಂಗಳೂರು, ನವೆಂಬರ್ 21 : ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ವಿನಯ್ ಅಪಹರಣ ಯತ್ನ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ. ಮುಂದಿನ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದ್ದು, ಇಂದು ಎನ್.ಆರ್.ಸಂತೋಷ್ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ವಿಚಾರಣೆಗೆ ಗೈರು ಹಾಜರಾಗುತ್ತಿದ್ದರು. ಇಂದು ಪೊಲೀಸರ ಮುಂದೆ ಹಾಜರಾಗದಿದ್ದರೆ ನಿರೀಕ್ಷಣಾ ಜಾಮೀನು ರದ್ದು ಮಾಡುವುದುದಾಗಿ ಕೋರ್ಟ್ ಎಚ್ಚರಿಕೆ ಕೊಟ್ಟಿತ್ತು.

ಮಂಗಳವಾರ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎ.ಆರ್.ಬಡಿಗೇರ್ ಮುಂದೆ ಸಂತೋಷ್ ವಿಚಾರಣೆಗೆ ಹಾಜರಾಗಿದ್ದರು. ಮಹಾಲಕ್ಷ್ಮೀಪುರ ಪೊಲೀಸ್ ಠಾಣೆ ಪಕ್ಕದ ಎಸಿಪಿ ಕಚೇರಿಯಲ್ಲಿ ವಿಚಾರಣೆ ನಡೆಯಿತು.
ಸಂತೋಷ್ ಮೊಬೈಲ್ ಪೋನ್ ಅನ್ನು ಪೊಲೀಸರು ವಶಕ್ಕೆ ನೀಡುವಂತೆ ಕೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ಪೊಲೀಸರು ಅಂತ್ಯಗೊಳಿಸಿದ್ದು, ಮುಂದಿನ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಸಂತೋಷ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂತೋಷ್ ವಿಚಾರಣೆಗೆ ಹಾಜರಾಗುತ್ತಿಲ್ಲ ಅವರ ಜಾಮೀನು ರದ್ದುಗೊಳಿಸಿ ಎಂದು ಪೊಲೀಸರು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications