80 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಭೂಗಳ್ಳರ ಪಾಲು, ಘರ್ಜಿಸಿದ ಜೆಸಿಬಿ! Bengaluru Property
ರಾಜಧಾನಿ ಬೆಂಗಳೂರಲ್ಲಿ ಒಂದು ಸಣ್ಣ ಸೈಟ್ ಖರೀದಿ ಮಾಡುವುದಕ್ಕೆ ಕೂಡ ಬಡವರು ಪರದಾಡುವ ಪರಿಸ್ಥಿತಿ ಇದೆ. ಆದರೆ ಭೂಗಳ್ಳರು ಮಾತ್ರ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಎಕರೆ ಎಕರೆ ಜಮೀನು ನುಂಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಿದ್ದಾಗ ಸರ್ಕಾರ ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇಂದು ಕೂಡ ಇದೇ ರೀತಿ, ಭೂ ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರ ಎದೆ ನಡುಗಿದೆ. ಬರೋಬ್ಬರಿ 80 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ರಕ್ಷಣೆ ಮಾಡಲಾಗಿದೆ.
ಒಟ್ಟು 16 ಎಕರೆಗೂ ಹೆಚ್ಚು ಭೂಮಿಯನ್ನು ರಕ್ಷಣೆ ಮಾಡಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯವೇ ಸುಮಾರು 80 ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಹೀಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಂಗಳೂರು ನಗರ ಜಿಲ್ಲೆಯಲ್ಲಿ ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗಗಳಾದ ಸ್ಮಶಾನ, ಗುಂಡುತೋಪು, ಡ್ರೈನೇಜ್, ರಾಜಕಾಲುವೆ, ಗೋಮಾಳ, ಕೆರೆ ಜಾಗ, ಸರ್ಕಾರಿ ಗೋಮಾಳ & ಹಿಡುವಳಿ ಸರ್ವೆ ನಂ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು.

ಒಂದೇ ಕಡೆ 7 ಎಕರೆ ಒತ್ತುವರಿ
ಆನೇಕಲ್ ತಾಲೂಕಿನಲ್ಲಿ ಒತ್ತುವರಿ ಕಾರ್ಯಾಚರಣೆ ನಡೆದಿದ್ದು, ಸರ್ಕಾರಿ ಭೂಮಿ ರಕ್ಷಣೆಯಾಗಿದೆ. ಜಗಣಿ ಹೋಬಳಿಯ ಕೊಪ್ಪ ಗ್ರಾಮದ ಸ.ನಂ. 110 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 7 ಎಕರೆ 0.21 ಗುಂಟೆಗಳಾಗಿದ್ದು, ಅಂದಾಜು 60 ಕೋಟಿ ರೂಪಾಯಿ ಮೌಲ್ಯದ ಜಮೀನು ಒತ್ತುವರಿ ತೆರವು ಮಾಡಲಾಗಿದೆ. ಆನೇಕಲ್ ತಾಲೂಕು ಕಸಬಾ ಹೋಬಳಿ ಮರಸೂರು ಗ್ರಾಮದ ಸ.ನಂ 499ರ ಒತ್ತುವರಿ ತೆರುವ ಮೂಲಕ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಜಾಗ ರಕ್ಷಣೆ ಮಾಡಿದ್ದಾರೆ.
ಅತ್ತಿಬೆಲೆ ಹೋಬಳಿ ಇಂಡಬೆಲೆ ಗ್ರಾಮದಲ್ಲಿ ಸರ್ವೆ ನಂಬರ್ 131 ಬಳಿ ರಾಜಕಾಲುವೆ ಒತ್ತುವರಿಯ ತೆರವು ಕಾರ್ಯಾಚರಣೆ ಮೂಲಕ 0.30 ಗುಂಟೆ ಜಾಗ ವಶಕ್ಕೆ ಪಡೆಯಲಾಗಿದೆ. ಹಾಗೂ ಅತ್ತಿಬೆಲೆ ಹೋಬಳಿ ಯಡವನಹಳ್ಳಿ ಗ್ರಾಮದ ಸ.ನಂ. 164 ಸರ್ಕಾರಿ ಜಾಗವನ್ನ ಒತ್ತುವರಿ ಮಾಡಿಕೊಳ್ಳಲಾಗಿತ್ತು, ಅದನ್ನು ಕೂಡ ತೆರವು ಮಾಡಲಾಗಿದೆ. ಅಧಿಕಾರಿಗಳು ಈಗಾಗಲೇ ನೋಟಿಸ್ ಕೊಟ್ಟು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರಿಂದ ಕಾರ್ಯಾಚರಣೆ ವೇಳೆ ಭದ್ರತೆ
ಇದೇ ರೀತಿಯಾಗಿ ಬೆಂಗಳೂರು ಪೂರ್ವ ತಾಲೂಕು, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಉತ್ತರ ತಾಲೂಕು, ಯಲಹಂಕ ತಾಲೂಕು, ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶದಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಒತ್ತುವರಿ ತೆರವು ಸಮಯದಲ್ಲಿ ಪೊಲೀಸರು ಕೂಡ ಅಗತ್ಯ ಭದ್ರತೆ ನೀಡಿದ್ದರು. ಈ ಮೂಲಕ ಬೆಂಗಳೂರು ನಗರದಲ್ಲಿ ಸರ್ಕಾರದ ಜಮೀನು ಒತ್ತುವರಿ ಮಾಡಿಕೊಂಡಿದ್ದವರಿಗೆ ಆಘಾತವೇ ಸಿಕ್ಕಿದೆ. ಕಾರ್ಯಾಚರಣೆ ಮತ್ತಷ್ಟು ವೇಗವಾಗಿ ಮುಂದುವರಿಯಲಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.












Click it and Unblock the Notifications