ಎನ್‌ಕೌಂಟರ್; ಪ್ರೇಯಸಿಯೇ ಕಾವಲಾಗಿದ್ದಳು ರೌಡಿ ಸ್ಲಂ ಭರತನಿಗೆ
ಬೆಂಗಳೂರು, ಫೆಬ್ರವರಿ 27: ಪೊಲೀಸರಿಂದ ಎನ್‌ಕೌಂಟರ್‌ಗೆ ಒಳಗಾಗಿ ಹತ್ಯೆಯಾದ ಬೆಂಗಳೂರು ರೌಡಿ ಶೀಟರ್ ಸ್ಲಂ ಭರತನ ಬಗ್ಗೆ ಕುತೂಹಲಕರ ಸಂಗತಿಗಳು ಹೊರಬಿದ್ದಿವೆ.
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ನಟೋರಿಯಸ್ ರೌಡಿಯನ್ನು ಹುಡುಕಲು ಬೆಂಗಳೂರು ಪೊಲೀಸರು ಹಗಲಿರಳು ನಿದ್ದೆ ಬಿಟ್ಟು ಹುಡುಕಾಡುತ್ತಿದ್ದರು. ಆದರೆ, ಸ್ಲಂ ಭರತ ದೂರದ ಉತ್ತರ ಪ್ರದೇಶದ ಮುರದಾಬಾದ್‌ನಲ್ಲಿ ತನ್ನ ಪ್ರೇಯಸಿಯ ಕಾವಲಿನಲ್ಲಿ ಕಾಲ ಕಳೆಯುತ್ತಿದ್ದ.
ಕಳೆದ ಸೋಮವಾರ ರೌಡಿ ಭರತನ ಬಂಧನದ ನಂತರ ಆತನನ್ನು ಬೆಂಗಳೂರಿಗೆ ಕರೆ ತರಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡು ಹೋಗುವಾಗ ರಾಜಗೋಪಾಲ ನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದ.

ಪ್ರೇಯಸಿಯಿಂದ ಗಲಾಟೆ
ಉತ್ತರ ಪ್ರದೇಶದ ಮುರದಾಬಾದ್‌ನಲ್ಲಿ ಬೆಂಗಳೂರು ಪೊಲೀಸರ ಆರು ತಂಡ ಬಂಧಿಸಲು ತೆರಳಿದ್ದಾಗ ಬಾರ್ ಡ್ಯಾನ್ಸರ್ ಆಗಿದ್ದ ರೌಡಿ ಭರತನ ಪ್ರೇಯಸಿ, ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಳು. ರೌಡಿಗಳು ಬಂದಿದ್ದಾರೆ ಎಂದು ಜನ ಸೇರಿಸಿ ಗಲಾಟೆ ಮಾಡಿಸಿದ್ದಳಂತೆ. ಕಡೆಗೂ ಪೊಲೀಸರು ಆತನನ್ನು ಬಂಧಿಸಿ ಕರ್ನಾಟಕಕಕ್ಕೆ ಕರೆ ತರುವಲ್ಲಿ ಸಫಲರಾಗಿದ್ದರು.

ನಂಬರ್ ಪ್ಲೇಟ್ ಇಲ್ಲದ ಕಾರ್‌ಗಳು
ಸ್ಲಂ ಭರತನನ್ನು ಪೊಲೀಸರು ಭೇಟೆಯಾಡಿದ್ದನ್ನು ಅರಿತ ಆತನ ಸ್ನೇಹಿತರು ಹೇಗಾದರೂ ಮಾಡಿ, ಭರತನನ್ನು ರಕ್ಷಿಸಿ, ಪೊಲೀಸರಿಂದ ಪಾರು ಮಾಡಬೇಕು ಎಂದು ಯಾವುದೇ ಸಿನಿಮಾ ದೃಶ್ಯಗಳಿಗೂ ಕಡಿಮೆ ಇರದಂತೆ ಪ್ಲಾನ್ ಮಾಡಿ, ಕಡೆಗ ರೌಡಿ ಭರತನ ಸಾವಿಗೆ ಕಾರಣರಾಗಿದ್ದಾರೆ. ಭರತನನ್ನು ಕರೆ ತರುವಾಗ ಪೀಣ್ಯ ಬಳಿ ನಂಬರ್ ಪ್ಲೇಟ್ ಇಲ್ಲದ ಎರಡು ಕಾರ್‌ಗಳಲ್ಲಿ ಬಂದು ಅಪಹರಿಸಿ ಓಡಿ ಹೋಗಲು ಯತ್ನಿಸಿದ್ದರು. ಆದರೆ, ಬೆಂಬಿಡದ ಪೊಲೀಸರು, ಭರತನನ್ನು ಬಂಧಿಸಲು ಯತ್ನಿಸಿದ್ದರು. ಆದರೆ, ರೌಡಿ ಭರತ ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದಾಗ ಎನ್‌ಕೌಂಟರ್ ನಡೆದಿದೆ.

ಇನ್ಸಪೆಕ್ಟರ್ ಮೇಲೆಯೇ ಹಲ್ಲೆ
ತಮಿಳುನಾಡು ಮೂಲದವನಾಗಿದ್ದ ಸ್ಲಂ ಭರತ ವಿರುದ್ಧ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪೊಲೀಸ್ ಠಾಣೆಗಳಲ್ಲಿ 47 ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿದ್ದವು. ಬನಶಂಕರಿಯಲ್ಲಿ ಸ್ನೇಹಿತನ ಹುಟ್ಟುಹಬ್ಬದ ವೇಳೆ ಪಾಲ್ಗೊಂಡಿದ್ದ ಆತನನ್ನು ಬಂಧಿಸಲು ತೆರಳಿದ್ದಾಗ ಇನ್ಸಪೆಕ್ಟರ್ ಒಬ್ಬರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಿದ್ದ.

ಪೊಲೀಸರ ಮೇಲೆ ಗುಂಡಿನ ದಾಳಿ
"ಮಧ್ಯರಾತ್ರಿ ಪೊಲೀಸರ ವಾಹನದ ಮೇಲೆ ದಾಳಿ ಮಾಡಿ ಸ್ಲಂ ಭರತ್‌ನನ್ನು ಆತನ ಸ್ನೇಹಿತನನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಬೆನ್ನತ್ತಿದ ರಾಜಗೋಪಾಲ ನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮೇಲೆಯೇ ರೌಡಿಗಳು ಗುಂಡಿನ ದಾಳಿ ಮಾಡಿದ್ದರು. ಈ ವೇಳೆ ಬುಲೆಟ್ ಪ್ರೂಪ್ ಜಾಕೆಟ್ ದರಿಸಿದ್ದರಿಂದ ಇನ್ಸಪೆಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ನಾಲ್ವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಕೂಡ ನಡೆದಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications