ಖಾಸಗಿ ಬಸ್ಸುಗಳಲ್ಲಿ ತುರ್ತುನಿರ್ಗಮನ ಕಡ್ಡಾಯ
ಬೆಂಗಳೂರು,ನ. 18 : ವೋಲ್ವೊ ಬಸ್ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಖಾಸಗಿ ಬಸ್ ಗಳಲ್ಲಿ ತುರ್ತು ನಿರ್ಗಮನ ದ್ವಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಮೂರು ತಿಂಗಳ ಅವಧಿಯಲ್ಲಿ ತುರ್ತು ನಿರ್ಗಮನ ದ್ವಾರ ನಿರ್ಮಿಸುವಂತೆ ಗಡುವು ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹವಾನಿಯಂತ್ರಿತ ವೋಲ್ವೊ ಸೇರಿದಂತೆ ಬಹುತೇಕ ಬಸ್‌ಗಳು ಸಂಪೂರ್ಣವಾಗಿ ಗಾಜಿನ ಕವಚದಿಂದ ನಿರ್ಮಿತಗೊಂಡಿವೆ. ಹಾಗಾಗಿ, ಈ ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರವೇ ಇರುವುದಿಲ್ಲ. ಇದಕ್ಕೆ ಆಂಧ್ರಪ್ರದೇಶದಲ್ಲಿ ನಡೆದ ದುರಂತವೇ ಸಾಕ್ಷಿ ಎಂದರು.

ಪ್ರಯಾಣಿಕರು ಸುರಕ್ಷತೆ ದೃಷ್ಠಿಯಿಂದ ಬಸ್ಸಿನ ಹಿಂಭಾಗ ಅಥವಾ ಬಲಭಾಗದಲ್ಲಿನ ಕಿಟಕಿಯ ಗಾಜು ತೆಗೆಸಿ, ತುರ್ತು ನಿರ್ಗಮನ ದ್ವಾರ ನಿರ್ಮಿಸಲು ಬಸ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಕ್ಕೆ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಮೂರು ತಿಂಗಳ ಕಾಲಾವಕಾಶ ಕೋರಿದ್ದಾರೆ ಎಂದು ತಿಳಿಸಿದರು.
ಬಸ್ ಮಾಲೀಕರಿಗೆ ಹಿಂಭಾಗದಲ್ಲಿ ಎರಡು ಆಸನಗಳನ್ನು ತೆರವುಗೊಳಿಸಿ, ದ್ವಾರ ನಿರ್ಮಿಸಬೇಕು. ಈ ದ್ವಾರ ತೆಗೆಯಲು ಪ್ರಯಾಣಿಕರಿಗೆ ಯಾವುದೇ ಅಡೆತಡೆ ಇರಬಾರದು. ದ್ವಾರವು ವಾಹನದ ಹೊರಭಾಗದಿಂದ ತೆಗೆಯುವಷ್ಟು ಎತ್ತರದಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಕೆಎಸ್ಆರ್ ಟಿಸಿ ಬಸ್‌ಗಳಲ್ಲೂ ಇಂತಹ ದ್ವಾರ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. (ಹೈದರಾಬಾದಿನ ಬಸ್ ದುರಂತದ ಚಿತ್ರಗಳು)
ಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಖಾಸಗಿ ಬಸ್ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಬಸ್ ಗಳಲ್ಲಿ ಔಷಧಗಳನ್ನೊಳಗೊಂಡ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಚಾಲಕರ ಕ್ಯಾಬಿನ್ ಹಿಂಭಾಗದಲ್ಲಿ ಅಳವಡಿಸಬೇಕು. ಬೆಂಕಿ ನಂದಿಸುವ ಉಪಕರಣ ಸಹ ಇರಬೇಕು ಎಂದು ಹೇಳಿದರು.
ಖಾಸಗಿ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಪೂರ್ಣ ಮಾಹಿತಿಯುಳ್ಳ ಟ್ರಿಪ್‌ಶೀಟ್ ಅನ್ನು ಖಾಸಗಿ ಬಸ್ ನವರು ಕಚೇರಿಗೆ ಸಲ್ಲಿಸಬೇಕು, ಒಂದು ಶೀಟ್ ಬಸ್ಸಿನಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ. ಇದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಹಾಯಕವಾಗಲಿದೆ ಎಂದರು. ಈ ಕುರಿತು ಮಾಲೀಕರಿಗೆ ಮಾಹಿತಿ ನೀಡಿದ್ದು ಅವರು ಒಪ್ಪಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. (ಹಾವೇರಿ ಬಸ್ ದುರಂತ)
ಸ್ಪೀಡ್ ಗವರ್ನರ್ ಕಡ್ಡಾಯ : ಖಾಸಗಿ ಬಸ್, ಲಾರಿ ಸೇರಿದಂತೆ ಇತರೆ ವಾಹನಗಳಿಗೆ 2014ರ ಏಪ್ರಿಲ್ 1 ರಿಂದ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಲಾಗಿದೆ. ಗರಿಷ್ಠ ವೇಗದ ಮಿತಿಯನ್ನು 80 ಕಿ.ಮೀಗೆ ನಿಗದಿಪಡಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. ಪ್ರತಿ 3 ತಿಂಗಳಿಗೊಮ್ಮೆ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸುವಂತೆ ಎಲ್ಲ ಆರ್‌ಟಿಓಗಳಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದು ಅವರು ತಿಳಸಿದರು.












Click it and Unblock the Notifications