ಬನ್ನೇರುಘಟ್ಟ ಉದ್ಯಾನದಲ್ಲಿ ‘ಸುವರ್ಣ’ ಆನೆ ಅಂತಿಮ ಸಂಸ್ಕಾರ
ಬೆಂಗಳೂರು: ಹೊಟ್ಟೆಯಲ್ಲೇ ಕಂದಮ್ಮನ ಕಿತ್ತುಕೊಂಡ ದೇವರು, ತಾಯಿ ಆನೆಯ ಉಸಿರನ್ನೂ ಕಸಿದುಕೊಂಡ ನೋವಿನ ನಡುವೆಯೂ ಮೃತ ಸುವರ್ಣ ಆನೆಯ ಅಂತಿಮ ಸಂಸ್ಕಾರ ಬನ್ನೇರುಘಟ್ಟದಲ್ಲಿ ನೆರವೇರಿದೆ. ನಿನ್ನೆ ಸುವರ್ಣ ಹೆಸರಿನ ಆನೆ ಚಿಕಿತ್ಸೆ ಫಲಿಸದೆ ಅಸುನೀಗಿತ್ತು. ಹೀಗಾಗಿ ಮೊದಲೇ ನಿರ್ಣಯ ಕೈಗೊಂಡಂತೆ ಬನ್ನೇರುಘಟ್ಟ ಉದ್ಯಾನದಲ್ಲಿ ಆನೆ ಅಂತಿಮ ಸಂಸ್ಕಾರ ನೆರವೇರಿದೆ.
ಅಂದುಕೊಂಡಂತೆ ನಡೆದಿದ್ದರೆ ಮರಿ ಜೊತೆಗೆ ಸುವರ್ಣ ಆನೆ ಆಟವಾಡುತ್ತಾ ಪ್ರವಾಸಿಗರ ಜೊತೆ ಕಾಲ ಕಳೆಯಬೇಕಿತ್ತು. ಆದ್ರೆ ಪ್ರಸವ ವೇದನೆ ಮುಗಿದರೂ ಸುವರ್ಣ ತನ್ನ ಮರಿಗೆ ಜನ್ಮ ನೀಡದೇ ಇದ್ದಾಗ ಬನ್ನೇರುಘಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರು. ತಕ್ಷಣ ವೈದ್ಯರನ್ನ ಕರೆಸಿ ಆನೆ ಹೊಟ್ಟೆ ತಪಾಸಣೆ ನಡೆಸಲಾಗಿತ್ತು. ಆದರೆ ಮೊದಲ ಆಘಾತ ಸಿಕ್ಕಿದ್ದೇ ಆಗ. ಭ್ರೂಣದಲ್ಲೇ ಮರಿ ಆನೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿತ್ತು.

ಗರ್ಭದಲ್ಲೇ ಸತ್ತು ಹೋಗಿದ್ದ ಮರಿ
ಅಷ್ಟಕ್ಕೂ ಸುವರ್ಣಗೆ ಜನಿಸಿದ ಹತ್ತನೇ ಮರಿ ಇದಾಗಿತ್ತು. ಆದರೆ ದುರಾದೃಷ್ಟ ಮರಿ ಆನೆ ಗರ್ಭದಲ್ಲೇ ಸತ್ತು ಹೋಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮರಿ ಹೊರತೆಗೆದಿದ್ದರು. ಈವರೆಗೂ 9 ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣ ಆನೆ ಹೊಸ ದಾಖಲೆ ಬರೆದಿತ್ತು. ಮರಿಗಳ ಜೊತೆ ಬನ್ನೇರುಘಟ್ಟದಲ್ಲೇ ಹಾಯಾಗಿತ್ತು ಸುವರ್ಣ. 23-24 ತಿಂಗಳಿಗೆ ಆನೆಗಳು ಮರಿ ಹಾಕುತ್ತವೆ, ಸುವರ್ಣ ಗರ್ಭ ಧರಿಸಿ ಅಂದಾಜು 23 ತಿಂಗಳು ಆಗಿತ್ತು. ಆದರೆ ದೇವರ ನಿರ್ಧಾರವೇ ಬೇರೆಯಾಗಿತ್ತು.
ನೋವಿನ ನಡುವೆ ಅಂತಿಮ ಸಂಸ್ಕಾರ
ಭ್ರೂಣದಲ್ಲೇ ಮರಿ ಆನೆ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಹೇಗಾದರೂ ತಾಯಿ ಆನೆ ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದ್ದರು ಅಧಿಕಾರಿಗಳು. ಇದಕ್ಕಾಗಿ ನೀಡಬೇಕಾದ ಚಿಕಿತ್ಸೆಗೂ ವೈದ್ಯರು ಮುಂದಾಗಿದ್ದರು. ಹೀಗೆ ಏನೆಲ್ಲಾ ಪ್ರಯತ್ನಪಟ್ಟರೂ ಚಿಕಿತ್ಸೆ ಫಲಿಸಲೇ ಇಲ್ಲ. ಭ್ರೂಣದಲ್ಲೇ ತನ್ನ ಕಂದಮ್ಮನನ್ನು ಕಳೆದುಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ತಾಯಿ ಆನೆ ಸುವರ್ಣ ಕೂಡ ಚಿಕಿತ್ಸೆ ಫಲಿಸದೆ ನಿನ್ನೆ 12.13 ಕ್ಕೆ ಇಹಲೋಕ ತ್ಯಜಿಸಿತ್ತು. ನೋವಿನ ನಡುವೆಯೂ ಬನ್ನೇರುಘಟ್ಟ ಸಿಬ್ಬಂದಿ ಮತ್ತು ಅಧಿಕಾರಿ ವರ್ಗ 'ಸುವರ್ಣ' ಆನೆಯ ಅಂತಿಮ ಸಂಸ್ಕಾರ ನೆರವೇರಿಸಿದೆ.

ಸೋಂಕಿನಿಂದ ಮೃತಪಟ್ಟ ಆನೆ?
ಸುವರ್ಣ ಹೊಟ್ಟೆಯಲ್ಲೇ ಮರಿ ಆನೆ ಮೃತಪಟ್ಟಿದ್ದ ಪರಿಣಾಮ ಸೋಂಕು ತಾಯಿ ಆನೆ ಹೊಟ್ಟೆಯಲ್ಲಿ ಬಹುಭಾಗ ಹರಡಿತ್ತು ಎನ್ನಲಾಗಿದೆ. ತಕ್ಷಣ ಚಿಕಿತ್ಸೆ ನೀಡಿದರೂ ಸೋಂಕು ಆನೆಯ ದೇಹದ ವಿವಿಧ ಅಂಗಗಳಿಗೆ ಸೋಂಕು ಹರಡಿದ್ದ ಪರಿಣಾಮ ಸುವರ್ಣ ಮೃತಪಟ್ಟಿದ್ದು, ವೈದ್ಯರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುವರ್ಣ ಮೃತಪಟ್ಟ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಅಂತಿಮ ಸಂಸ್ಕಾರ ನೆರವೇರಿಸಿ ಬಂದರೂ ಸುವರ್ಣ ನೆನಪು ಮಾತ್ರ ಸಿಬ್ಬಂದಿ ಮನಸ್ಸಿನಿಂದ ಮರೆಯಾಗುತ್ತಿಲ್ಲ.
ಇಷ್ಟುದಿನ ಮೃಗಾಲಯಕ್ಕೆ ಬರುವವರ ಮನರಂಜಿಸುತ್ತಿತ್ತು ಆ ಆನೆ. ಯಾರಿಗೂ ತೊಂದರೆ ಮಾಡದೆ, ಎಲ್ಲರ ಜೊತೆಗೂ ಬೆರೆಯುತ್ತಿತ್ತು. ಹೀಗೆ ಎಲ್ಲರ ಪ್ರೀತಿಯ ಆನೆಗೆ ಆ ದೇವರು ಹೆಚ್ಚು ಆಯಸ್ಸನ್ನೇ ನೀಡಿರಲಿಲ್ಲ ಅಂತಾ ಕಾಣುತ್ತದೆ. ಹೊಟ್ಟೆಲ್ಲೇ ಕಂದಮ್ಮನನ್ನು ಕಿತ್ತುಕೊಂಡ ದೇವರು, ಕಡೆಗೆ ತಾಯಿ ಆನೆಯ ಉಸಿರನ್ನೂ ಕಸಿದಿದ್ದಾನೆ. ಬನ್ನೇರುಟ್ಟ (bannerghatta) ಉದ್ಯಾನಕ್ಕೆ ಬರುತ್ತಿದ್ದ ಪ್ರವಾಸಿಗರಿಗೆ ಇನ್ನುಮುಂದೆ 'ಸುವರ್ಣ' ಆನೆಯ ದರ್ಶನ ಸಿಗುವುದಿಲ್ಲ. ಮಣ್ಣಲ್ಲಿ ಮಣ್ಣಾಗಿ ಹೋಗಿರುವ ಸುವರ್ಣ ಇನ್ನು ನೆನಪು ಮಾತ್ರ.

48 ವರ್ಷದ ಮೃತ ಸುವರ್ಣ ಜನಿಸಿದ್ದು 1975ರಲ್ಲಿ. ಹುಟ್ಟಿದ ಜಾಗದಲ್ಲೇ ಸುವರ್ಣ ಆನೆ ಮಣ್ಣು ಸೇರಾಗಿದೆ. ಕಳೆದ 48 ವರ್ಷದಿಂದ ಬನ್ನೇರುಘಟ್ಟ ಉದ್ಯಾನದ ವಾತಾವರಣಕ್ಕೆ ಸುವರ್ಣ ಮುದ ನೀಡಿದ್ದಳು. ಆನೆ ಎಲ್ಲರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುತ್ತಿತ್ತು. ಕಿರಿಕಿರಿ ಇಲ್ಲದ ಸುವರ್ಣ ಜೊತೆಗೆ ಸಿಬ್ಬಂದಿ ಕೂಡ ಅಷ್ಟೇ ಪ್ರೀತಿಯಿಂದ ಇದ್ದರು. ಆದರೆ ದಿಢೀರ್ ಸುವರ್ಣ ಜೀವ ಕಳೆದುಕೊಂಡಿದ್ದು, ಸಿಬ್ಬಂದಿಗೆ ನೋವು ತಡೆಯಲಾಗುತ್ತಿಲ್ಲ.
ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುವರ್ಣ, ವನಿತಾ, ಶಿವ, ಗೋಕುಲ, ವನಶ್ರೀ, ಗಜೇಂದ್ರ, ಶ್ರೀರಾಮ, ಭವಾನಿ, ಸುರೇಶ, ಸುಧಾ ಎಂಬ ಹೆಸರಿನ ಆನೆಗಳಿಗೆ ಜನ್ಮ ನೀಡಿತ್ತು. ಒಂದು ಆನೆ ಮೈಸೂರು ಮೃಗಾಲಯದಲ್ಲಿದ್ದರೆ, ವನಿತಾ ಹಾಗೂ ಗೋಕುಲ ಆನೆಗಳು ಮೃತಪಟ್ಟಿವೆ.












Click it and Unblock the Notifications