ಈ ಬಾರಿ ಎಡಗೈ ಹೆಬ್ಬೆರಳಿಗೆ ಶಾಯಿ ಗುರುತು
ಬೆಂಗಳೂರು, ಏ. 15 : ರಾಜ್ಯದಲ್ಲಿ ಏಪ್ರಿಲ್ 17ರಂದು, ಗುರುವಾರ ಹದಿನಾರನೇ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಚ್ಚಲಾಗುತ್ತಿದೆ. 17ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಇತ್ತೀಚೆಗೆ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಸಹಕಾರಿ ಸಂಘಗಳಿಗೆ ರಾಜ್ಯದ ಹಲವೆಡೆ ಚುನಾವಣೆಗಳು ನಡೆದಿರುವ ಕಾರಣ, ಎಡಗೈ ಹೆಬ್ಬೆರಳಿಗೆ ಶಾಯಿ ಗುರುತು ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ತಿಳಿಸಿದರು.
ಮಂಗಳವಾರ ಸಂಜೆ 6 ಗಂಟೆಯಿಂದ ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗಿದ್ದು ಅಭ್ಯರ್ಥಿಗಳು, ಪಕ್ಷಗಳು, ಸಾರ್ವಜನಿಕ ಸಭೆ, ಮೆರವಣೆಗೆ ನಡೆಸುವಂತಿಲ್ಲ. ಪತ್ರಿಕಾಗೋಷ್ಠಿಗಳನ್ನು ಏರ್ಪಡಿಸುವಂತಿಲ್ಲ ಎಂದು ಅವರು ತಿಳಿಸಿದರು. [ಮತಗಟ್ಟೆ ಮಾಹಿತಿಗೆ ಎಸ್ಎಂಎಸ್ ಮಾಡಿರಿ]

ಸುದ್ದಿ ವಾಹಿನಿಗಳಲ್ಲಿ ಚರ್ಚಾಗೋಷ್ಠಿಗಳನ್ನು ನಿಷೇಧಿಸುವ ಬಗ್ಗೆ ಯಾವುದೇ ನಿರ್ದಿಷ್ಟ ಆದೇಶ ಇಲ್ಲ. ಆದರೆ ಗುಂಪು ಚರ್ಚೆಗಳು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಿರುವುದು ಸೂಕ್ತ ಎಂದು ಅವರು ಸಲಹೆ ಮಾಡಿದರು.
ಚುನಾವಣಾ ಅಕ್ರಮ : ಎಚ್.ಡಿ. ಕೋಟೆ ತಾಲ್ಲೂಕಿನ ಬಾವಲಿ ಚೆಕ್‌ಪೋಸ್ಟ್‌ನಲ್ಲಿ 8.55 ಲಕ್ಷ ರು., ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನಲ್ಲಿ 27 ಲಕ್ಷ ರು., ಬೀದರ್‌ನ ಮಂಗಲ್‌ಪೇಟೆಯಲ್ಲಿ 4.23 ಲಕ್ಷ ರು., ಬಳ್ಳಾರಿ ಜಿಲ್ಲೆಯಲ್ಲಿ 4 ಲಕ್ಷ ರು., ಧಾರವಾಡ ಜಿಲ್ಲೆಯಲ್ಲಿ 1.29 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ. ಈವರೆಗೆ ವಶಪಡಿಸಿಕೊಳ್ಳಲಾದ ಹಣದ ಒಟ್ಟು ಮೊತ್ತ 21.95 ಕೋಟಿ ರು.ಗಳು, ಇತರೆ ವಸ್ತುಗಳ ಮೌಲ್ಯ 2.8 ಕೋಟಿ ರು. ಎಂದು ಅವರು ತಿಳಿಸಿದರು.
ಮದ್ಯ ವಶ : ರಾಜ್ಯದ ಹಲವೆಡೆಗಳಲ್ಲಿ ಒಟ್ಟು 260 ಲೀಟರ್ ಮದ್ಯ 62 ಲೀಟರ್ ಬೀಯರ್ ವಶಪಡಿಸಿಕೊಳ್ಳಲಾಗಿದೆ. ಸೊರಬ ತಾಲ್ಲೂಕಿನಲ್ಲಿ 20,000 ರು. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ 2.28 ಕೋಟಿ ರು. ಮೌಲ್ಯದ 44,924 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. [ಲೂಟಿಕೋರ ಚೋರ್ ಬಾಬುಲಾಲಾ ಯಾರು?]
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ : ಈವರೆಗೆ ಒಟ್ಟು 1,559 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ, ವಿಶೇಷಾಧಿಕಾರಿ (ಸ್ವೀಪ್) ಕೆ.ಎಸ್. ಬೇವಿನಮರದ ಅವರು ಉಪಸ್ಥಿತರಿದ್ದರು.












Click it and Unblock the Notifications