ರಾಜಧಾನಿ ಬೆಂಗಳೂರಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?
ಬೆಂಗಳೂರು: ವಿಧಾನಸಭೆ ಚುನಾವಣೆ ಬಂದ್ರೆ ಸಾಕು ಬೆಂಗಳೂರಿನ ಮೇಲೆ ಪ್ರತಿಯೊಂದು ಪಕ್ಷ ಕಣ್ಣಿಟ್ಟಿರುತ್ತೆ. ಬರೋಬ್ಬರಿ 28 ಕ್ಷೇತ್ರಗಳ ತವರು ನಮ್ಮ ಬೆಂಗಳೂರು. ಹಾಗಾದರೆ 2023ರಲ್ಲಿ ಯಾವ ಪಕ್ಷ ಬೆಂಗಳೂರಿನಲ್ಲಿ ಅತಿಹೆಚ್ಚು ಸ್ಥಾನ ಗೆದ್ದಿದೆ? ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ? ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಹೌದು, ಮೊದಲೇ ಹೇಳಿದಂತೆ ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರಲ್ಲೇ ಅತಿಹೆಚ್ಚು ಅಂದರೆ 28 ಕ್ಷೇತ್ರಗಳು ಬರುತ್ತವೆ. ಹೀಗಾಗಿ ಬೆಂಗಳೂರಿನಲ್ಲಿ ಗೆದ್ದು ಬಲ ತೋರಿಸಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭರ್ಜರಿ ಫೈಟ್ ಇತ್ತು. ಈ ಕಾದಾಟದಲ್ಲಿ ಗೆಲುವು ಸಾಧಿಸಿದ್ದು ಮಾತ್ರ ಬಿಜೆಪಿ, 28 ಕ್ಷೇತ್ರಗಳಲ್ಲಿ BJP ಬರೋಬ್ಬರಿ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ, 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಆದರೆ ಜೆಡಿಎಸ್ ರಾಜ್ಯ ರಾಜಧಾನಿಯಲ್ಲಿ ಯಾವುದೇ ಸ್ಥಾನವನ್ನೂ ಗೆಲ್ಲದೆ 2023ರ ಚುನಾವಣೆ ಮುಗಿಸಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಬೆಂಗಳೂರಿನ 28 ಕ್ಷೇತ್ರಗಳು ಯಾವುವು ಅನ್ನೋದನ್ನ ನೋಡೋದಾದ್ರೆ, ಯಲಹಂಕ, ಕೃಷ್ಣರಾಜಪುರ, ಬ್ಯಾಟರಾಯನಪುರ, ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಿಕೇಶಿ ನಗರ, ಸರ್ವಜ್ಞ ನಗರ, ಸಿ. ವಿ. ರಾಮನ್ ನಗರ, ಶಿವಾಜಿ ನಗರ, ಶಾಂತಿ ನಗರ, ಗಾಂಧಿನಗರ, ರಾಜಾಜಿ ನಗರ, ಗೋವಿಂದರಾಜ ನಗರ, ವಿಜಯ ನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಬಸವನಗುಡಿ, ಪದ್ಮನಾಭ ನಗರ, ಬಿಟಿಎಂ ಲೇಔಟ್, ಜಯನಗರ, ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್ ಕ್ಷೇತ್ರಗಳು ಬೆಂಗಳೂರು ನಗರಕ್ಕೆ ಸೇರುತ್ತವೆ.
ಬೆಂಗಳೂರು ರಿಸಲ್ಟ್ ಏನು? ಎತ್ತ?
ಅಂದಹಾಗೆ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಕೃಷ್ಣರಾಜಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜುಗೆ ಜಯ ಸಿಕ್ಕಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಜಯ, ಇನ್ನು ದಾಸರಹಳ್ಳಿ ಕ್ಷೇತ್ರದಿಂದ ಬಿಜೆಪಿಯ ಎಸ್.ಮುನಿರಾಜುಗೆ ಗೆಲುವು ಸಿಕ್ಕಿದೆ.
ಬೊಮ್ಮನಹಳ್ಳಿ, ಆನೇಕಲ್ ಯಾರಿಗೆ?
ಇನ್ನು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಗೋಪಾಲಯ್ಯ ಜಯಗಳಿಸಿದ್ದು, ಮಲ್ಲೇಶ್ವರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತೆ ಗೆದ್ದು ಬೀಗಿದ್ದಾರೆ. ಇನ್ನು ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಗೆದ್ದಿದ್ದು, ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್‌ನಿಂದ ಎ.ಸಿ.ಶ್ರೀನಿವಾಸ ಗೆದ್ದಿದ್ದಾರೆ. ಈ ಕ್ಷೇತ್ರಗಳನ್ನು ಹೊರತುಪಡಿಸಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ, ಆನೇಕಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವಣ್ಣ ಗೆದ್ದಿದ್ದಾರೆ.
ಶಿವಾಜಿ ನಗರ, ಶಾಂತಿ ನಗರದಲ್ಲಿ ಕಾಂಗ್ರೆಸ್
ಸರ್ವಜ್ಞ ನಗರ ಕಾಂಗ್ರೆಸ್ ಅಭ್ಯರ್ಥಿ ಕೆ.ಜೆ.ಜಾರ್ಜ್ ಗೆಲುವು ಸಾಧಿಸಿದ್ದರೆ, ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಎಸ್.ರಘು, ಶಿವಾಜಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗೂ ಶಾಂತಿ ನಗರದಲ್ಲಿ ಎನ್.ಎ.ಹ್ಯಾರಿಸ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಗೆದ್ದಿದ್ದಾರೆ. ಗಾಂಧಿ ನಗರ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಗೆದ್ದಿದ್ದಾರೆ. ರಾಜಾಜಿನಗರ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.
ರಾಮಲಿಂಗಾ ರೆಡ್ಡಿ ಭರ್ಜರಿ ಗೆಲುವು
ಗೋವಿಂದರಾಜ ನಗರದಲ್ಲಿ ಕಾಂಗ್ರೆಸ್‌ನಿಂದ ಪ್ರಿಯಕೃಷ್ಣ ಮತ್ತೆ ಗೆದ್ದಿದ್ದರೆ, ವಿಜಯ ನಗರ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ ಕಾಂಗ್ರೆಸ್ ಪಕ್ಷದಿಂದ ತಮ್ಮ ಗೆಲುವಿನ ಓಟ ಮುಂದುವರಿಸಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಪಕ್ಷದಿಂದ, ಚಿಕ್ಕಪೇಟೆಯಲ್ಲಿ ಉದಯ್ ಬಿ.ಗರುಡಾಚಾರ್ ಬಿಜೆಪಿಯಿಂದ ಮತ್ತು ಬಸವನಗುಡಿಯಲ್ಲಿ ರವಿ ಸುಬ್ರಹ್ಮಣ್ಯ ಬಿಜೆಪಿಯಿಂದ ಹಾಗೂ ಪದ್ಮನಾಭ ನಗರದಲ್ಲಿ ಆರ್.ಅಶೋಕ್ ಬಿಜೆಪಿ ಪಕ್ಷದಿಂದ, ಬಿಟಿಎಂ ಲೇಔಟ್‌ನಲ್ಲಿ ರಾಮಲಿಂಗಾರೆಡ್ಡಿ ಕಾಂಗ್ರೆಸ್‌ನಿಂದ, ಜಯನಗರದಲ್ಲಿ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ನಿಂದ ಹಾಗೂ ಮಹದೇವಪುರದಲ್ಲಿ ಎಸ್.ಮಂಜುಳಾ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.












Click it and Unblock the Notifications