ಬಿಎಲ್ ಸಂತೋಷ್ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ಲೀಡರ್ಸ್?
ಬೆಂಗಳೂರು: ಉತ್ತರ ಭಾರತದಲ್ಲಿ ಜಾರಿಗೆ ತಂದ ಗುಜರಾತ್ ಮಾಡೆಲ್ ಕರ್ನಾಟಕದಲ್ಲೂ ವರ್ಕೌಟ್ ಆಗಿ, ಬಿಜೆಪಿ ಮತ್ತೊಮ್ಮೆ ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸುತ್ತದೆ ಎಂಬುದೇ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿತ್ತು. ಆದರೆ ಲೆಕ್ಕಾಚಾರ ಕೈಕೊಟ್ಟು, ಬಿಜೆಪಿ ಹೀನಾಯ ಸೋಲು ಕಂಡಿದೆ. ಈ ನಡುವೆ ಬಿಎಲ್ ಸಂತೋಷ್ ವಿರುದ್ಧವೇ ಬಿಜೆಪಿ ಒಳಗೆ ಅಸಮಾಧಾನದ ಹೊಗೆ ಎದ್ದಿರುವ ಆರೋಪ ಕೇಳಿಬರುತ್ತಿದೆ.
ಪರಿಸ್ಥಿತಿ ಹೀಗಿರುವಾಗ ಬಿಜೆಪಿ ನಾಯಕರ ಅಸಮಾಧಾನ ಮುಂಬರುವ ಲೋಕಸಭಾ ಎಲೆಕ್ಷನ್ ಹೊತ್ತಿಗೆ ಮತ್ತಷ್ಟು ಧಗಧಗಿಸುವ ಮುನ್ಸೂಚನೆ ಸಿಕ್ಕಿದೆ. ಹಾಗೇ ಬಿಎಲ್ ಸಂತೋಷ್ ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳೆಲ್ಲಾ ಬಿಜೆಪಿ ಮತ್ತೆ ಉಲ್ಟಾ ಹೊಡೆಯುತ್ತಾ? ಈಗ ಕರ್ನಾಟಕ ವಿಧಾನಸಭೆ ಚುನಾವಣೆಯ ಹೊಣೆಯನ್ನ ಯಾರು ಹೊರಬೇಕು? ಯಾರು ಸೋಲಿನ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು? ನಳಿನ್ ಕುಮಾರ್ ಕಟೀಲ್ ಅಥವಾ ಬಿಎಲ್ ಸಂತೋಷ್? ಹೀಗೆ ಹಲವು ಪ್ರಶ್ನೆಗಳು ಕೇಸರಿ ಪಡೆ ನಾಯಕರ ನಡುವೆ ಚರ್ಚೆಗೆ ಬಂದಿವೆ.

ಬಿಎಲ್ ಸಂತೋಷ್ ವಿರುದ್ಧ ಸಿಟ್ಟೇಕೆ?
ಅಂದಹಾಗೆ ಬಿಜೆಪಿಯಲ್ಲಿ ಅ'ಸಂತೋಷ' ಮಡುಗಟ್ಟಿದ್ದು, ಯಾವುದೇ ಸಂದರ್ಭದಲ್ಲೂ ಈ ಅಸಮಾಧಾನವು ಸ್ಪೋಟಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಿನ ಘಟನೆ ಕಾಂಗ್ರೆಸ್‌ಗೆ ಮತ್ತಷ್ಟು ಸಹಕಾರಿ ಆಗುವ ಸಾಧ್ಯತೆ ಹೆಚ್ಚಾದ ಹೊತ್ತಲ್ಲೇ ಮತ್ತೊಂದು ಚರ್ಚೆ ಶುರುವಾಗಿದೆ. ಅದೇನೆಂದರೆ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಇಷ್ಟು ಸಿಟ್ಟೇಕೆ? ಎಂದು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದ್ದು, ಅದರ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.
ಬಿಎಲ್ ಸಂತೋಷ್ ಮಾಡಿದ್ದೇನು? ಆಗಿದ್ದೇನು?
ಹೌದು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜವಾಬ್ದಾರಿ ನಿರ್ವಹಿಸುವ ನೆಪದಲ್ಲಿ ಹಲವು ವಿಚಾರದಲ್ಲಿ ಮೂಗು ತೂರಿಸಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಪ್ರತಿಯೊಂದರಲ್ಲೂ 'ಶಕ್ತಿ'ಪ್ರದರ್ಶನಕ್ಕೆ ಮುಂದಾದದ್ದು ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಎಸ್ ಯಡಿಯೂರಪ್ಪ ವಿಚಾರ ಕೂಡ ಇಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರ ಹಿಂದೆ ಯಾರ ಕೈವಾಡವಿತ್ತು ಎಂಬುದು ಮಾತುಕತೆಗೆ ವೇದಿಕೆ ಒದಗಿಸಿದೆ.
ಇಲ್ಲಿ ಪ್ರಮುಖವಾಗಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬ,ಲಕ್ಷ್ಮಣ ಸವದಿ ಜತೆ ಮತ್ತಿಬ್ಬರಿಗೆ ಡಿಸಿಎಂ ಹುದ್ದೆ ಕಲ್ಪಿಸಿ, ಬಿಎಸ್‌ವೈ ಮೇಲೆ ನಿಯಂತ್ರಣದ ಪ್ರಯತ್ನಗಳು ನಡೆದವು ಎಂಬ ವಿಚಾರ. ಬಿಎಸ್‌ವೈ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಬಾರಿ ಬಹಿರಂಗ ಹೇಳಿಕೆ ನೀಡಿದ್ದು, ಹಿಂದೆ ಬಿಎಸ್‌ವೈ ಸಿಎಂ ಪಟ್ಟದಿಂದ ಕೆಳಗಿಳಿಸಲು ಆಂತರಿಕವಾಗಿ ಒತ್ತಡ ಹೇರಿದ ಆರೋಪಗಳು ಆಂತರಿಕವಾಗಿ ಕಿಚ್ಚು ಹತ್ತಿಸಿವೆ. ಇದೆಲ್ಲದರ ಹಿಂದೆ ಬಿಎಲ್ ಸಂತೋಷ್ ಇದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಸರ್ಕಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ್ರಾ?
ಬಸವರಾಜ ಬೊಮ್ಮಾಯಿ ಆಡಳಿತ ನಡೆಸುವಾಗ ಮುಕ್ತವಾಗಿ ಕಾರ್ಯಸಲು ಅಡಚಣೆ ಮಾಡಿದ ಆರೋಪ, ಈ ನಡುವೆ ಸಚಿವ ಸಂಪುಟ, ನಿಗಮ- ಮಂಡಳಿಗಳ ನೇಮಕದಲ್ಲಿ ಹಸ್ತಕ್ಷೇಪ ಮಾಡಿದ ಮಾತುಗಳು ಕೂಡ ಇದೀಗ ಕೇಸರಿ ಪಾಳಯದಲ್ಲಿ ಚರ್ಚೆಗೆ ಬಂದಿವೆ. ಪಕ್ಷದೊಳಗೆ ಬಣಗಳ ಸೃಷ್ಟಿ, ಪರಸ್ಪರ ಕಾಲೆಳೆಯುವ ತಂತ್ರಗಾರಿಕೆ, ವರಿಷ್ಠರಿಗೆ ಮತ್ತೊಂದು ಬಣದ ವಿರುದ್ಧ ದೂರು ಸಲ್ಲಿಕೆಗೆ ಕುಮ್ಮಕ್ಕು. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಗುಂಪುಗಾರಿಕೆ, BSY ಮತ್ತಿತರರು ಮುಂದಿಟ್ಟ ಪಟ್ಟಿಗೆ ವಿರುದ್ಧವಾಗಿ ಇನ್ನೊಂದು ಪಟ್ಟಿ. ಹೀಗೆ ನಾನಾ ತಪ್ಪುಗಳೇ ಸೋಲಿಗೆ ಕಾರಣ ಎನ್ನುವ ಮಾತು ಕೇಳಿಬಂದಿದೆ.
ಒಟ್ನಲ್ಲಿ ಎಲ್ಲಾ ಆರೋಪಗಳ ಬೆನ್ನಲ್ಲೇ, ಬಿಎಲ್ ಸಂತೋಷ್ ವಿರುದ್ಧ ಪಕ್ಷದ ಒಳಗೊಳಗೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಹೀನಾಯ ಸೋಲಿನ ಹೊಣೆ ಯಾರು ಹೊರಲಿದ್ದಾರೆ? ಎಂಬ ಚರ್ಚೆ ಕೂಡ ಶುರುವಾಗಿದೆ. ಈ ಹೊತ್ತಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರ್ನಾಟಕ ಬಿಜೆಪಿ ಸೋಲಿನ ಹೊಣೆ ಹೊರುತ್ತಾರಾ? ಇಲ್ಲ ಗುಜರಾತ್ ಸ್ಟಾಟಜಿ ಫಾಲೋ ಮಾಡಲು ಬಂದಿದ್ದ ಬಿಎಲ್ ಸಂತೋಷ್ ಸೋಲಿನ ಹೊಣೆ ಹೊರಲಿದ್ದಾರಾ? ಎಂಬ ಪ್ರಶ್ನೆ ಬಿಜೆಪಿ ನಾಯಕರಲ್ಲಿ ಬಿರುಗಾಳಿ ಎಬ್ಬಿಸಿದೆ.












Click it and Unblock the Notifications