ಚುನಾವಣೆಗೆ ಸಿದ್ದರಾಮಯ್ಯ 20 ಕೋಟಿ ವೆಚ್ಚ ಆರೋಪ: ಹೈಕೋರ್ಟ್‌ನಲ್ಲಿ ಸ್ವಾರಸ್ಯಕರ ವಿಚಾರಣೆ
ಬೆಂಗಳೂರು, ಮಾರ್ಚ್ 14: 'ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಯಲ್ಲಿ 20 ಕೋಟಿ ವೆಚ್ಚ ಮಾಡಿರೆಂದು ಆರೋಪಗಳೆಲ್ಲಾ ಸಂಪೂರ್ಣ ಸುಳ್ಳಿನ ಕಂತೆ, ಅದಕ್ಕೆ ದಾಖಲೆಗಳೆಲ್ಲಿವೆ ಎಂದು ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಸಿದ್ದರಾಮಯ್ಯ ಆಯ್ಕೆ ಅನೂರ್ಜಿತಗೊಳಿಸಬೇಕೆಂದು ಕೋರಿ ಮೈಸೂರಿನ ವರುಣಾ ಹೋಬಳಿ ಕೂಡನಹಳ್ಳಿಯ ಕೆ.ಶಂಕರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಸಿದ್ದರಾಮಯ್ಯ ಪರ ಹಿರಿಯ ವಕೀಲ ಕೆ.ರವಿವರ್ಮ ಕುಮಾರ್ ವಾದ ಮಂಡಿಸಿ, 'ಸಿದ್ದರಾಮಯ್ಯ ಕಾನೂನು ಬದ್ಧವಾಗಿ ನಿಗದಿಗೊಳಿಸಲಾದ ಚುನಾವಣಾ ವೆಚ್ಚದ ಮಿತಿ ದಾಟಿ ₹20 ಕೋಟಿ ವೆಚ್ಚ ಮಾಡಿದ್ದರೆ ಅರ್ಜಿದಾರರು ಚುನಾವಣೆ ಸಮಯದಲ್ಲೇ ಸಕ್ಷಮ ಪ್ರಾಧಿಕಾರಕ್ಕೆ ಯಾಕೆ ದೂರು ನೀಡಲಿಲ್ಲ' ಎಂದು ಕೇಳಿದರು.
'ಸಿದ್ದರಾಮಯ್ಯ ಇಷ್ಟೊಂದು ಹಣವನ್ನು ತಮ್ಮ ವಾಹನಗಳಿಗೆ ವೆಚ್ಚ ಮಾಡಿದರೇ? ಕಾರಿಗೆ, ಭಿತ್ತಿಪತ್ರಗಳಿಗೆ, ಪೋಸ್ಟರ್‌ಗಳಿಗಾಗಿ ವೆಚ್ಚ ಮಾಡಿದರೆ? ಮಾಡಿದ್ದರೆ ಯಾವಾಗ ಮಾಡಿದರು ಎಂಬುದಕ್ಕೆಲ್ಲಾ ಉತ್ತರ ಬೇಕಾಗುತ್ತದೆ. ಈ ಅಂಶವನ್ನು ಜನಪ್ರತಿನಿಧಿ ಕಾಯ್ದೆ 123 (6)ರ ಪ್ರಕಾರ ದಾವೆಯಲ್ಲಿ ಅಡಕ ಮಾಡಿರಬೇಕಿತ್ತು' ಎಂದು ಪ್ರತಿಪಾದಿಸಿದರು.
'ಇದ್ಯಾವುದನ್ನೂ ಮಾಡದೆ ಈಗ ಈ ತಕರಾರು ಹೂಡಿರುವುದು ಉದ್ದೇಶಪೂರ್ವಕ, ಲೆಕ್ಕಾಚಾರದ ಮತ್ತು ಕಿಡಿಗೇಡಿತನದ ನಡೆ. ಇಂತಹ ಅರ್ಜಿ ಸಲ್ಲಿಸುವ ಮೂಲಕ ಶಂಕರ್ ನ್ಯಾಯಾಲಯದ ದಾರಿಯನ್ನಷ್ಟೇ ಅಲ್ಲ, ಜಗತ್ತಿನೇ ದಾರಿಯನ್ನೇ ತಪ್ಪಿಸಿದ್ದಾರೆ' ಎಂದು ದೂರಿದರು.
'ಅಕ್ಕಿ ಬೆಂದಿದೆಯೇ ಎಂಬುದಕ್ಕೆ ಪೂರಾ ಪಾತ್ರೆಯಲ್ಲಿನ ಅಕ್ಕಿಯನ್ನೆಲ್ಲಾ ಪರಿಶೀಲಿಸಬೇಕಿಲ್ಲ. ಒಂದು ಕಾಳನ್ನು ನೋಡಿದರೆ ಸಾಕಾಗುತ್ತದೆ' ಎಂದು ಅರ್ಜಿದಾರರ ಬಗ್ಗೆ ವ್ಯಂಗ್ಯವಾಡಿದ ರವಿವರ್ಮ ಕುಮಾರ್, 'ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಸಲ್ಲಿಸಲಾಗಿರುವ ಈ ಅರ್ಜಿ ದ್ವೇಷ ಮತ್ತು ಸುಳ್ಳು ಆರೋಪಗಳಿಂದ ಕೂಡಿದೆ' ಎಂದರು.
ಸಿದ್ದರಾಮಯ್ಯ ವಿರುದ್ಧದ ಅರ್ಜಿಯಲ್ಲಿರುವುದೇನು..?
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಮತದಾರರಿಗೆ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಆಮಿಷ ಒಡ್ದಿದೆ. ಈ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಸಮ್ಮತಿಯೊಂದಿಗೇ ಪ್ರಕಟಿಸಲಾಗಿದೆ. ಇದು ಲಂಚಕ್ಕೆ ಸಮನವಾಗಿದ್ದು, ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರಿಗೆ ಪ್ರೇರೇಪಣೆ ನೀಡಿದೆ' ಎಂದು ಅರ್ಜಿಯಲ್ಲಿ ದೂರಲಾಗಿದೆ.
ಜನಪ್ರತಿನಿಧಿ ಕಾಯ್ದೆ-1951ರ ಕಲಂ 123 (1), 123 (2), 123 (4), 123 (6) ಹಾಗೂ 100 (1), (ಬಿ), (1) (ಡಿ) (4) ಅನ್ನು ಉಲ್ಲಂಘಿಸಿರುವ ಸಿದ್ದರಾಮಯ್ಯ ಮತದಾರರಿಗೆ ಆಮಿಷವೊಡ್ಡಿ ಅಪರಾಧ ಎಸಗಿದ್ದಾರೆ. ಆದ್ದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು. ಆರು ವರ್ಷಗಳ ಕಾಲ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಮತ್ತು ಚುನಾವಣಾ ಭ್ರಷ್ಟಾಚಾರ ಎಸಗಿರುವ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕೋರಿದ್ದಾರೆ.












Click it and Unblock the Notifications