Police Transfer: ಏಕಪಕ್ಷಿಯ ಕಾರ್ಯ ಆರೋಪದಡಿ 10 ಪೊಲೀಸರ ವರ್ಗಾವಣೆ: ಚುನಾವಣೆ ಆಯೋಗ ಆದೇಶ
ಬೆಂಗಳೂರು, ಏಪ್ರಿಲ್ 18: ಘೋಷಣೆಯಾಗಿರುವ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯು ಪಾರದರ್ಶಕವಾಗಿ ಸುಗಮವಾಗಿ ನಡೆಸುವ ಮೂರು ವಿಧಾನಸಭಾ ಕ್ಷೇತ್ರಗಳ ಪೊಲೀಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಇದು ಹಲವು ಅಚ್ಚರಿಗಳನ್ನು ಮೂಡಿಸಿದೆ.
ಚುನಾವಣೆ ಆಯೋಗವು ಬೆಂಗಳೂರು ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ 10 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಬೆಂಗಳೂರಿನ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಆರ್. ದೇವರಾಜು ಅವರನ್ನು ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಶಿವಪ್ರಕಾಶ್ ದೇವರಾಜು ಅವರ ನೇಮಕವಾಗಿದೆ.

ಬೆಂಗಳೂರಿನ ಮತ್ತೊಂದು ಕ್ಷೇತ್ರವಾದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಅರುಣ್ ಗೌಡ ಬದಲಿಗೆ ವಿನಾಯಕ್ ಎಂ.ಶೆಟಗಿರಿ ನಿಯೋಜನೆಗೊಂಡಿದ್ದಾರೆ.
ಬಿಜೆಪಿ ಪರ ಪೊಲೀಸರು ಕಾರ್ಯ: ಆರೋಪ
ರಾಜಗೋಪಾಲ್ ನಗರ, ನಂದಿನಿ ಬಡಾವಣೆ, ಯಶವಂತಪುರ ಮತ್ತು ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಾದ ಜಗದೀಶ್, ಮಂಜುನಾಥ್, ಸುರೇಶ್.ಕೆ ಮತ್ತು ಶಿವಣ್ಣ ಅವರ ಜಾಗಕ್ಕೆ ಕ್ರಮವಾಗಿ ಗಣೇಶ್ ಹೆಗಡೆ, ಮಂಜುನಾಥ ನಲವಾಗಲು, ಶ್ರೀಕಂಠಯ್ಯ ಬಿಎನ್ ಹಾಗೂ ಬಿ.ಎಂ. ಶಿವಕುಮಾರ್ ನೇಮಕ ಮಾಡಲಾಗಿದೆ ಎಂದು ಆದೇಶವು ತಿಳಿಸಿದೆ.
ವರ್ಗಾವಣೆ ಗೊಂಡ ಪೊಲೀಸ್ ಅಧಿಕಾರಿಗಳು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಆರ್‌ಆರ್ ನಗರದ ಅಭ್ಯರ್ಥಿ ಸಚಿವ ಮುನಿರತ್ನ ಪರ ಕೆಲಸ ಮಾಡುತ್ತಾರೆ ಎಂಬ ಆರೋಪ ಇತ್ತು. ಇದನ್ನು ಆಧರಿಸಿ ಆ ಕ್ಷೇತ್ರದ ಆರು ಪೊಲೀಸ್ ಅಧಿಕಾರಿಗಳ ವಿರುದ್ಧ ಚುನಾವಣಾ ಸಮಿತಿ ಕ್ರಮಕೈಗೊಂಡಿದೆ.

ಸಚಿವರ ಸೂಚನೆ ಮೇರೆಗೆ ಪೊಲೀಸರ ಕೆಲಸ
ಅಷ್ಟೇ ಅಲ್ಲದೇ ಸಚಿವರ ಸೂಚನೆ ಮೇರೆಗೆ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದ ಕೆಲವು ಪೊಲೀಸ್ ಅಧಿಕಾರಿಗಳು ಬಿಜೆಪಿ ಪಕ್ಷಕ್ಕೆ ಒಲವು ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇತ್ತೀಚೆಗಷ್ಟೇ ಮುನಿರತ್ನ ವಿರುದ್ಧ ಆರ್‌ಆರ್‌ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಬಿಜೆಪಿ ನಾಯಕ ಕನ್ನಡಿಗರು ಮತ್ತು ತಮಿಳರ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದನ್ನು ಈ ವೇಳೆ ಸ್ಮರಿಸಬಹುದು.
ಚುನಾವಣಾ ಪಾರದರ್ಶಕತೆಗಾಗಿ ಚುನಾವಣೆ ಆಯೋಗವು ಆರ್ ಆರ್ ನಗರ ಕ್ಷೇತ್ರದಿಂದ ಆರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಅದಲ್ಲದೇ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ಚುನಾವಣಾ ಸಮಿತಿಯು ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.
ಕಲ್ಯಾಣ ಕರ್ನಾಟಕದಲ್ಲೂ ಅಧಿಕಾರಿಗಳ ಸ್ಥಳಾಂತರ
ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರ ವ್ಯಾಪ್ತಿಯಲ್ಲಿನ ಪೊಲೀಸ್ ಅಧಿಕಾರಿಗಳಾದ ಮಂಜುನಾಥ್ ಅವರನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಯಪ್ಪ ಎಸ್ ನ್ಯಾಮಗೌಡರ್ ಮತ್ತು ಆನಂದ ವಾಗಮೋಡೆ ಅವರನ್ನು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಮಹಾಂತೇಶ್ ಕೆ.ದ್ಯಾಮನವರ್ ಅವರನ್ನು ನಿಯೋಜಿಸಲಾಗಿದೆ.
ಸುರಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯನ್ನು ಅಸಮರ್ಥವಾಗಿ ನಿಭಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಸಮಿತಿಯು ಪೊಲೀಸ್ ಅಧಿಕಾರಿಗಳ ವಿರುದ್ಧ ಈ ಕ್ರಮ ಜರುಗಿಸಿರುವುದಾಗಿ ಹೇಳಿದೆ.
ಅದೇ ಭಾಗದ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಉಪ ಪೊಲೀಸ್ ವರಿಷ್ಠಾಧಿಕಾರಿ ಎಸ್.ಮಂಜುನಾಥ್ ಅವರ ಬದಲಾಗಿ ವೇಣುಗೋಪಾಲ್ ಅವರು ಕೆಲಸ ಮಾಡಲಿದ್ದಾರೆ. ಅದೇ ಕ್ಷೇತ್ರದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಖ್ವಾಜಾ ಹುಸೇನ್ ಬದಲಿಗೆ ವಸಂತಕುಮಾರ್ ಅವರನ್ನು ನೇಮಕವಾಗಿದ್ದಾರೆ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು, ಬೆಂಬಲಿಗರನ್ನು ಬೆದರಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಇಲ್ಲಿನ ಪೊಲೀಸರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಚುನಾವಣೆ ಆಯೋಗ ಮಾಹಿತಿ ನೀಡಿದೆ.












Click it and Unblock the Notifications