ಚುನಾವಣಾ ಬಾಂಡ್ ಪ್ರಕರಣ; ಎಫ್ಐಆರ್ನಲ್ಲಿ ನಿರ್ಮಲಾ ಸೀತಾರಾಮನ್, ನಳಿನ್ ಕುಮಾರ್, ವಿಜಯೇಂದ್ರ ಹೆಸರು
ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್ಐಆರ್ನಲ್ಲಿ ನಿರ್ಮಲಾ ಸೀತಾರಾಮನ್ ಜೊತೆಗೆ ನಳಿನ್ ಕುಮಾರ್ ಮತ್ತು ಬಿವೈ ವಿಜಯೇಂದ್ರ ಹೆಸರು ಕೂಡ ಇದೆ.
ಪ್ರಕರಣದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಎ1 ಆರೋಪಿಯಾಗಿ ಹೆಸರಿಸಲಾಗಿದೆ. ಇಡಿ ಅಧಿಕಾರಿಗಳು ಎ2, ರಾಷ್ಟ್ರೀಯ ಜನತಾ ಪಕ್ಷದ ಕಚೇರಿ ಎ3, ನಳಿನ್ ಕುಮಾರ್ ಕಟೀಲ್ ಎ4, ಬಿವೈ ವಿಜಯೇಂದ್ರ ಎ5 ಎಂದು ದಾಖಲಿಸಲಾಗಿದೆ.

ಖಾಸಗಿ ದೂರಿನ ಅನ್ವಯ ಕ್ರಮ
ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಸಹ ಅಧ್ಯಕ್ಷ ಆದರ್ಶ ಅಯ್ಯರ್ ನೀಡಿದ್ದ ಖಾಸಗಿ ದೂರನ್ನು ದಾಖಲಿಸಿ ವಿಚಾರಣೆ ನಡೆಸಿದ ನಗರದ 42ನೇ ಎಸಿಎಂಎಂ ನ್ಯಾಯಾಲಯ ಠಾಣೆಗೆ ದೂರಿನ ಪ್ರತಿ ಮತ್ತು ದಾಖಲೆಯನ್ನು ಕಳಿಸುವಂತೆ ಸೂಚನೆ ನೀಡಿ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶ ತಲುಪುತ್ತಿದ್ದಂತೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅರ್ಜಿದಾರ ಆದರ್ಶ ಅಯ್ಯರ್ ಪರವಾಗಿ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10 ಕ್ಕೆ ಮುಂದೂಡಲಾಗಿದೆ. ಐಪಿಸಿ 120 ಬಿ, ಐಪಿಸಿ 34, ಐಪಿಸಿ 384,120 ಬಿ ಸೆಕ್ಷನ್‌ಗಳ ಆಧಾರದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಚುನಾವಣಾ ಬಾಂಡ್
ರಾಜಕೀಯ ಪಕ್ಷಗಳು ಕಪ್ಪು ಹಣ ಪಡೆಯುವುದನ್ನು ತಪ್ಪಿಸಲು ಮತ್ತು ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಗಳನ್ನು ಪಡೆಯಲು 2018ರ ಬಜೆಟ್‌ನಲ್ಲಿ ಚುನಾವಣಾ ಬಾಂಡ್‌ಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿತ್ತು. ಬ್ಯಾಂಕ್ ಮೂಲಕ ಹಣ ಪಾವತಿ ಮಾಡಿ ಬಾಂಡ್‌ಗಳನ್ನು ಖರೀದಿ ಮಾಡುವ ಮೂಲಕ ಪಕ್ಷಗಳಿಗೆ ಹಣ ನೀಡಲು ಅವಕಾಶ ನೀಡಿದ್ದರಿಂದ, ಇದು ಪಾರದರ್ಶಕ ಪ್ರಕ್ರಿಯೆ ಎಂದು ಹೇಳಲಾಗಿತ್ತು.
ಆದರೆ ದೇಣಿಗೆ ನೀಡಿದವರ ಹೆಸರು ಬಹಿರಂಗಪಡಿಸಲು ಬ್ಯಾಂಕ್‌ಗಳು ನಿರಾಕರಿಸಿದ್ದವು. ಆದರೆ 2024ರ ಫೆಬ್ರವರಿ 15ರಂದು ಸುಪ್ರೀಂಕೋರ್ಟ್ ಚುನಾವಣಾ ಬಾಂಡ್‌ಗಳನ್ನು ರದ್ದು ಮಾಡಿ ಆದೇಶ ನೀಡಿತ್ತು, ದೇಣಿಗೆ ನೀಡಿದವರ ಪಟ್ಟಿಯನ್ನು ಬಿಡುಗಡೆ ಮಾಡಲು ಸೂಚನೆ ಕೊಟ್ಟಿತ್ತು. ಎಸ್‌ಬಿಐ ನೀಡಿದ ಅಂಕಿಅಂಶಗಳ ಪ್ರಕಾರ 2018 ರಿಂದ 2022ರವರೆಗೆ 9,208 ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡಲಾಗಿದ್ದು, ಚುನಾವಣಾ ಮೂಲಕ ಬಿಜೆಪಿ 6,986.5 ಕೋಟಿ ರೂಪಾಯಿ ದೇಣಿಗೆ ಪಡೆದಿರುವದು ಬೆಳಕಿಗೆ ಬಂದಿತ್ತು.












Click it and Unblock the Notifications