MLA Munirathna: ಶಾಸಕ ಮುನಿರತ್ನ ಮೊಟ್ಟೆ ಕಥೆ, ಪರಿಚಯ ಹೇಳಿಕೊಂಡ ಕುಸುಮಾ
ಬೆಂಗಳೂರು, ಡಿಸೆಂಬರ್ 26: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಗುರುವಾರ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆದರು. ಬುಧವಾರ ಅವರ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಮುನಿರತ್ನ ಆರೋಪಿಸಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ಮೊಟ್ಟೆ ಎಸೆತ ಪ್ರಕರಣದ ಬಳಿಕ ಮಾತನಾಡಿದ್ದ ಶಾಸಕ ಮುನಿರತ್ನ, "ನನಗೆ ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗನ್ಮ್ಯಾನ್ ಕೇಳಿದ್ದೆ, ಆದರೂ ಕೊಟ್ಟಿಲ್ಲ. ಈ ಘಟನೆಗೆ ಡಿಸಿಎಂ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್, ಹನುಮಂತರಾಯಪ್ಪ, ಕುಸುಮಾ ಹನುಮಂತರಾಯಪ್ಪ ಅವರೇ ಕಾರಣ" ಎಂದು ದೂರಿದ್ದರು. ಈ ಹೇಳಿಕೆಗೆ ಕುಸುಮಾ ಹನುಮಂತರಾಯಪ್ಪ ಕಟುವಾಗಿ ಪ್ರತಿಕ್ರಿಯೆಯನ್ನು ನೀಡಿದ್ದರು.

ಗುರುವಾರ ಆರ್. ಆರ್. ನಗರ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ ತಮ್ಮ ಪರಿಚಯ ಹೇಳಿಕೊಂಡಿರುವ ಅವರು, 'ನನ್ನ ಬಗ್ಗೆ ಆಧಾರರಹಿತವಾಗಿ ಮಾತನಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ' ಎಂದು ಹೇಳಿದ್ದಾರೆ.
ಕುಸುಮಾ ಹನುಮಂತರಾಯಪ್ಪ ಪೋಸ್ಟ್: ನನ್ನ ಹಿನ್ನೆಲೆ... ನಾನು ಕುಸುಮ, ಇಂಜಿನಿಯರಿಂಗ್ ಹಾಗೂ ಎಂಎಸ್ ಸ್ನಾತಕೋತ್ತರ ಪದವಿಧರೆ, ಪ್ರಾಧ್ಯಪಕಿಯ ವೃತ್ತಿಯಲ್ಲಿದ್ದು ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ.
ಮಾಗಡಿ ಮೂಲದವರಾದ ನನ್ನ ತಾತ ಹನುಮೇಗೌಡ ಹಾಗೂ ಅಜ್ಜಿ ಪುಟ್ಟಮ್ಮ ಕೃಷಿಕರು. ಮಲ್ಲತ್ತಹಳ್ಳಿ ಮೂಲದ ಮತ್ತೊಬ್ಬ ತಾತ ಕೆಂಪಯ್ಯ ಮತ್ತು ಅಜ್ಜಿ ಗಂಗಮ್ಮ ಕೂಡ ಕೃಷಿಕರು.
ಇನ್ನೂ ನನ್ನ ತಂದೆ ಹನುಮಂತರಾಯಪ್ಪ ಬಿಎಂಟಿಸಿಯಲ್ಲಿ ಕಂಡಕ್ಟರ್ ವೃತ್ತಿಯಲ್ಲಿದ್ದವರು ಸ್ವಯಂನಿವೃತ್ತಿಯ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ, ತಾಯಿ ಭೈರಮ್ಮ ಗೃಹಿಣಿ.
ನನ್ನ ತಂಗಿ ಎಂಬಿಎ ಪದವಿಧರೆ.
ಸಹೋದರ ಕೂಡ ಲಂಡನ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಕಾನೂನು ಪದವಿಧರ.
ನನ್ನ ಹಿನ್ನೆಲೆ ಬಗ್ಗೆ ಮಾತನಾಡುವವರು ಒಮ್ಮೆ ಕಣ್ತೆರೆದು ನೋಡಲಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
1. ನಮ್ಮ ಕುಟುಂಬದಲ್ಲಿ ಯಾರೂ ಕೂಡ ಕ್ರಿಮಿನಲ್ ಹಿನ್ನಲೆಯುಳ್ಳವರಿಲ್ಲ.
2. ಯಾರೂ ಕೂಡ ಜಾತಿ ನಿಂದನೆ ಮಾಡಿಲ್ಲ.
3. ನನ್ನ ಕುಟುಂಬದ ಯಾರೊಬ್ಬರೂ ಕೂಡ ಹೆಣ್ಣುಮಕ್ಕಳ ಅವಹೇಳನ ಮಾಡಿಲ್ಲ.
4. ನನ್ನ ಕುಟುಂಬದ ಯಾವೊಬ್ಬ ಸದಸ್ಯರೂ ರೇಪ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿಲ್ಲ.
5. ನನ್ನ ಕುಟುಂಬದ ಯಾರೊಬ್ಬರೂ ಕಳ್ಳ ಬಿಲ್ ಮಾಡಿಸಿಕೊಂಡ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿಲ್ಲ.
6. ನಾನು ದಲಿತರ ಬಗ್ಗೆ ಯಾವುದೇ ರೀತಿಯ ತುಚ್ಚ ಮಾತುಗಳನ್ನು ಎಂದಿಗೂ ಆಡಿಲ್ಲ.
7. ನಮ್ಮ ಕುಟುಂಬದ ಯಾರೊಬ್ಬರೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿರಲಿಲ್ಲ.
8. ನನ್ನ ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ ಯಾವ ಅಧಿಕಾರಿಗಳ ಅಮಾನತಿಗೆ ನಾನು ಕಾರಣಳಾಗಿಲ್ಲ.
9. ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೆದು ಹಣ ನೀಡುವಂತೆ ಹೆದರಿಸಲಿಲ್ಲ.
10. ಹೆಚ್ಚಿನದಾಗಿ ನನ್ನ ಸಹೋದರನ ವೃತ್ತಿ ವಕೀಲಿಕೆ ನೆನಪಿರಲಿ, ಆತ ಯಾವುದೇ ರೌಡಿ ಶೀಟರ್ ಅಲ್ಲ.
ನನ್ನ ಬಗ್ಗೆ ಆಧಾರರಹಿತವಾಗಿ ಮಾತನಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಸುಮಾ ಹನುಮಂತರಾಯಪ್ಪ ಹೇಳುವ ಮೂಲಕ ಶಾಸಕ ಮುನಿರತ್ನ ಎದುರಿಸುತ್ತಿರುವ ಪ್ರಕರಣಗಳ ಕುರಿತು ವಿವರಗಳನ್ನುನೀಡಿ, ಅವರಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications