Bengaluru egg: ಬೆಂಗಳೂರಿನಲ್ಲಿ ಮೊಟ್ಟೆ ಬಳಕೆ ಹೆಚ್ಚಳ: ವರ್ಷಕ್ಕೆ ಒಬ್ಬರು ಎಷ್ಟು ಮೊಟ್ಟೆ ತಿನ್ನುತ್ತಾರೆ ಗೊತ್ತಾ?
ಬೆಂಗಳೂರು ಅಕ್ಟೋಬರ್ 14: ಬೆಂಗಳೂರಿನಲ್ಲಿ ಮೊಟ್ಟೆಗಳನ್ನು ಸೇವಿಸುವವರ ಸಂಖ್ಯೆ ಅಧಿಕವಾಗಿದೆ. ನಗರದಲ್ಲಿ ಪ್ರತೀ ವರ್ಷ ಸರಾಸರಿ ತಲಾ 200 ಮೊಟ್ಟೆಗಳನ್ನು ಸೇವಿಸಲಾಗುತ್ತಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ದ್ವಿಗುಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಕೋಳಿ ಉದ್ಯಮದ ಪಶುವೈದ್ಯರ ಸಂಸ್ಥೆಯ ಅಧ್ಯಕ್ಷ ಪ್ರೊ.ಜಿ.ದೇವೇಗೌಡ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ.
ಶುಕ್ರವಾರ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕೋ-ಆಪರೇಟಿವ್ ಪೌಲ್ಟ್ರಿ ಫೆಡರೇಶನ್ ಲಿಮಿಟೆಡ್ ಮತ್ತು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಮೊಟ್ಟೆ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ದೇವೇಗೌಡ, ನಗರದಲ್ಲಿ ದಿನಕ್ಕೆ 75ರಿಂದ 80 ಲಕ್ಷ ಮೊಟ್ಟೆ ಬಳಕೆಯಾಗುತ್ತಿದೆ ಎಂದು ಹೇಳಿದರು.

ಜನಸಂಖ್ಯೆಯ ಗಾತ್ರ, ಮೊಟ್ಟೆ ಸೇವನೆಯ ಪ್ರಯೋಜನಗಳ ಬಗ್ಗೆ ಅರಿವು, ಕೊಳ್ಳುವ ಸಾಮರ್ಥ್ಯ ಮತ್ತು ಸುಲಭ ಲಭ್ಯತೆಯಂತಹ ಅಂಶಗಳು ಹೆಚ್ಚಿನ ಮೊಟ್ಟೆಯ ಬಳಕೆಗೆ ಕೊಡುಗೆ ನೀಡುತ್ತಿವೆ. ಕರ್ನಾಟಕದಲ್ಲಿ ಮೊಟ್ಟೆಯ ಸೇವನೆಯು ಉತ್ತರ ಪ್ರದೇಶಗಳಿಗಿಂತ ದಕ್ಷಿಣ ಭಾಗಗಳಲ್ಲಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಬೆಂಗಳೂರಿನಂತಹ ಮೆಗಾ ಸಿಟಿಗಳಲ್ಲಿ ಮೊಟ್ಟೆ ಬಳಕೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮೊಟ್ಟೆಗಳು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ತುಂಬಾ ಒಳ್ಳೆಯದು. ಪ್ರೋಟೀನ್, ಕೋಲೀನ್, ರಿಬೋಫ್ಲಾವಿನ್ (ವಿಟಮಿನ್ ಬಿ 2), ವಿಟಮಿನ್ ಬಿ 12, ಬಯೋಟಿನ್ (ಬಿ 7), ಪ್ಯಾಂಟೊಥೆನಿಕ್ ಆಮ್ಲ (ಬಿ 5), ಅಯೋಡಿನ್ ಮತ್ತು ಸೆಲೆನಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ದೇಹಕ್ಕೆ ಮೊಟ್ಟೆ ಒದಗಿಸುತ್ತದೆ. ಇದು ಸ್ನಾಯುಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಮೂಳೆ ಆರೋಗ್ಯ, ಮೆದುಳಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ವಿವರಿಸಿದರು.
ಮೊಟ್ಟೆ ಸೇವನೆಯ ಪ್ರಯೋಜನವನ್ನು ತಿಳಿದ ಜನ ಹೆಚ್ಚಾಗಿ ಇದನ್ನು ಬಳಕೆ ಮಾಡುತ್ತಿದ್ದಾರೆ. ಜೊತೆಗೆ ಇದು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವುದರಿಂದ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಲು ಜನರನ್ನು ಪ್ರೋತ್ಸಾಹಿಸುತ್ತಿದೆ.

ಕರ್ನಾಟಕದಲ್ಲಿ ಮೊಟ್ಟೆ ಉತ್ಪಾದನೆ
ಕರ್ನಾಟಕವು ದಿನಕ್ಕೆ 2.5 ಕೋಟಿ ಮೊಟ್ಟೆಗಳನ್ನು ಉತ್ಪಾದಿಸುತ್ತದೆ. ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ಮೊಟ್ಟೆ ಸೇವನೆಯಲ್ಲಿ ಏರಿಕೆ ಕಂಡುಬಂದಿದೆ. ಸಾಂಕ್ರಾಮಿಕ ನಂತರ ಜನರಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಜಾಗೃತಿ ಕಂಡುಬರುತ್ತಿದೆ.
ಮೊಟ್ಟೆಯು ಕೈಗೆಟುಕುವ ಆಹಾರದ ಮೂಲವಾಗಿದ್ದು ಅದು ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಈ ವೇಳೆ ಮಾತನಾಡಿದ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ವ್ಯವಹಾರ ಮುಖ್ಯಸ್ಥ ಗಿರಿಧರ್ ಕೊತಾವರ್ ಅವರು ಹೇಳಿದರು.
ದೇಶದಲ್ಲಿ ಪ್ರತಿನಿತ್ಯ 33-35 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಆ ಉತ್ಪಾದನೆಯಲ್ಲಿ ದಕ್ಷಿಣದ ರಾಜ್ಯಗಳು ಹೆಚ್ಚಿನ ಪಾಲು ಹೊಂದಿವೆ. 2023ಕ್ಕೆ ಕರ್ನಾಟಕದ ಉತ್ಪಾದನೆ 2.5 ಕೋಟಿ ತಲುಪಿದೆ. ಬೆಂಗಳೂರು ಮತ್ತು ಅದರ ನೆರೆಹೊರೆಯ ಜಿಲ್ಲೆಗಳಾದ ಕೊಪ್ಪಳ, ಹೊಸಪೇಟೆ, ಮೈಸೂರು, ಚಳ್ಳಕೆರೆ, ದಾವಣಗೆರೆ ಮತ್ತು ಇತರ ಜಿಲ್ಲೆಗಳ ಹೊರವಲಯದಲ್ಲಿ ಲೇಯರ್ಡ್ ಕೋಳಿ ಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಾಗಿದೆ.
ಲೇಯರ್ಡ್ ಕೋಳಿ ಸಾಕಾಣಿಕೆಯಲ್ಲಿ ತೊಡಗಿರುವ ರೈತರು ತಮ್ಮ ವ್ಯವಹಾರಗಳನ್ನು ನಡೆಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ, ಆದರೆ ದೊಡ್ಡ ಫಾರಂಗಳನ್ನು ನಡೆಸುತ್ತಿರುವವರು ಬೆಳವಣಿಗೆಯನ್ನು ಕಾಣುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು.












Click it and Unblock the Notifications