ಬೆಂಗಳೂರಿನಲ್ಲಿ ಚೈನೀಸ್ ಲೋನ್ ಆಪ್‌ಗಳ ಮೇಲೆ ಇಡಿ ದಾಳಿ: 17 ಕೋಟಿ ರೂ. ವಶ
ಬೆಂಗಳೂರು, ಸೆಪ್ಟೆಂಬರ್ 03: ಚೀನಾ ವ್ಯಕ್ತಿಗಳಿಂದ ನಿಯಂತ್ರಿತ ಅಕ್ರಮ ತ್ವರಿತ ಸ್ಮಾರ್ಟ್‌ಫೋನ್ ಆಧಾರಿತ ಸಾಲ ನೀಡುವ ರೇಜರ್‌ಪೇ, ಪೇಟಿಎಂ ಮತ್ತು ಕ್ಯಾಶ್‌ಫ್ರೀಯಂತಹ ಆನ್‌ಲೈನ್ ಪಾವತಿ ಸಂಸ್ಥೆಗಳ ಬೆಂಗಳೂರಿನ ಕಚೇರಿಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.
ಕರ್ನಾಟಕದ ರಾಜಧಾನಿ ನಗರ ಬೆಂಗಳೂರಿನ ಆರು ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಲಾಯಿತು. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಇಡಿ ತನಿಖಾ ಸಂಸ್ಥೆಯು ದಾಳಿಯ ಸಮಯದಲ್ಲಿ ಈ ಚೀನೀ ವ್ಯಕ್ತಿಗಳ ನಿಯಂತ್ರಿತ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ.
ಈ ಘಟಕಗಳ ಕಾರ್ಯವೈಖರಿಯು ಬಗ್ಗೆ ಮಾಹಿತಿ ನೀಡಿದ ಇಡಿ, ಚೀನಿ ವ್ಯಕ್ತಿಗಳು ನಿಯಂತ್ರಿಸುತ್ತಿದ್ದ ಈ ಆಪ್‌ಗಳು ಭಾರತೀಯರ ನಕಲಿ ದಾಖಲೆಗಳನ್ನು ಬಳಸಿಕೊಂಡು ಇಲ್ಲಿಯವರನ್ನು ನಕಲಿ ನಿರ್ದೇಶಕರನ್ನಾಗಿ ಮಾಡುತ್ತಿದ್ದರು. ಇದರಿಂದ ಹಣಕಾಸಿನ ಅಪರಾಧಕ್ಕೆ ಕಾರಣವಾಗುತ್ತಿದ್ದರು ಎಂದು ಅದು ಆರೋಪಿಸಿದೆ. ಪೇಮೆಂಟ್ ಆಪ್‌ಗಳು ಬ್ಯಾಂಕ್‌ಗಳೊಂದಿಗೆ ಹೊಂದಿರುವ ವಿವಿಧ ವ್ಯಾಪಾರಿ ಐಡಿಗಳು, ಖಾತೆಗಳ ಮೂಲಕ ಈ ಆಪ್ ಆಧಾರಿತ ಸಂಸ್ಥೆಗಳು ಅಕ್ರಮ ವ್ಯವಹಾರವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಇಡಿ ವಿವರಿಸಿದೆ.

ರೇಜರ್ ಪೇ ಪ್ರೈ.ಲಿ., ಕ್ಯಾಶ್ ಫ್ರೀ ಪೇಮೆಂಟ್ಸ್, ಪೇಟಿಎಂ ಪೇಮೆಂಟ್ ಸರ್ವೀಸ್ ಲಿ. ಮತ್ತು ಇತರ ಚೀನಾದ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುವ ಟಕಗಳು ಶೋಧ ಕಾರ್ಯಾಚರಣೆಯಲ್ಲಿ ಒಳಗೊಂಡಿವೆ ಎಂದು ಇಡಿ ಹೇಳಿದೆ. ತನಿಖೆಯಲ್ಲಿರುವ ಘಟಕಗಳು ಎಂಸಿಎ (ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ) ವೆಬ್‌ಸೈಟ್, ನೋಂದಾಯಿತ ವಿಳಾಸದಲ್ಲಿ ನೀಡಲಾದ ವಿಳಾಸಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಬದಲಿಗೆ ಯಾವುದೋ ನಕಲಿ ವಿಳಾಸವನ್ನು ಹೊಂದಿವೆ ಎಂದು ಇಡಿ ಹೇಳಿದೆ.

ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರಿಗೆ ಕಿರುಕುಳ ಮತ್ತು ಸುಲಿಗೆಯಲ್ಲಿ ತೊಡಗಿದ್ದಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು, ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆ ದಾಖಲಿಸಿರುವ ಕನಿಷ್ಠ 18 ಎಫ್‌ಐಆರ್‌ಗಳನ್ನು ಆಧರಿಸಿ ತನ್ನ ತನಿಖೆ ನಡೆಯುತ್ತಿದೆ ಎಂದು ಇಡಿ ಹೇಳಿದೆ.












Click it and Unblock the Notifications