ಬಿಬಿಎಂಪಿ ವ್ಯಾಪ್ತಿಯಲ್ಲಿ 94,92,564 ಮತದಾರರು
ಬೆಂಗಳೂರು, ಜನವರಿ 13; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜನರು ಮತದಾರರ ಪಟ್ಟಿಯನ್ನು ಪರಿಶೀಲನೆ ಮಾಡಲು ಅವಕಾಶ ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯನ್ನು (2022ರ ಜನವರಿ 1ಕ್ಕೆ ಅನ್ವಯವಾಗುವಂತೆ) ಪರಿಷ್ಕರಣೆ ಮಾಡಲಾಗಿದೆ. ಗುರುವಾರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 94,92,564 ಮತದಾರರು ಇದ್ದಾರೆ. ಇವರಲ್ಲಿ 49,34,810 ಪುರುಷರು, 45,56,097 ಮಂದಿ ಮಹಿಳೆಯರು, 1657 ಮಂದಿ ತೃತೀಯ ಲಿಂಗಿಗಳು ಸೇರಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕಚೇರಿಗಳಲ್ಲಿ, ಮತದಾರರ ಸಹಾಯಕ ನೋಂದಣಾಧಿಕಾರಿ ಕಚೇರಿಯಲ್ಲಿ ಮತ್ತು ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ ಜನರು ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ.
ಆನ್‌ಲೈನ್ ಮೂಲಕವೂ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ವೆಬ್ ಸೈಟ್ https://www.ceokarnataka.kar.nic.in// ಅಥವ ಬಿಬಿಎಂಪಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ವ್ಯಾಪ್ತಿಯ 8 ವಿಧಾನಸಭಾ ಮತಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗಿದೆ. ಜನವರಿ 1, 2022ರ ಅರ್ಹತೆಯಂತೆ ಮತದಾರರ ಅಂತಿಮ ಪಟ್ಟಿಯನ್ನು ಜನವರಿ 13ರಂದು ಪ್ರಕಟಿಸಲಾಗಿದೆ.
ಮತದಾರರ ಅಂತಿಮ ಪಟ್ಟಿಯು ಆನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ಲಭ್ಯವಿದೆ. ಜನರು ಪಟ್ಟಿಯನ್ನು ಪರಿಶೀಲನೆ ಮಾಡಲು ಅವಕಾಶ ನೀಡಲಾಗಿದೆ. ಪಟ್ಟಿಯಲ್ಲಿ ಬದಲಾವಣೆ ಇದ್ದರೆ ಮುಂದಿನ ಪರಿಷ್ಕರಣೆ ಸಮಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಆದರೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ವರ್ಷದಲ್ಲಿ ನಡೆಯಲಿದ್ದು, ಆಗ ಮತ್ತೊಮ್ಮೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. 2020ರ ಸೆಪ್ಟೆಂಬರ್ 10ಕ್ಕೆ ಕೌನ್ಸಿಲ್ ಅವಧಿ ಪೂರ್ಣಗೊಂಡಿದ್ದು ಚುನಾವಣೆ ನಡೆಯಬೇಕಿದೆ.
ಕರ್ನಾಟಕ ಸರ್ಕಾರ ಬಿಬಿಎಂಪಿಯ 198 ವಾರ್ಡ್‌ಗಳ ಸಂಖ್ಯೆಯನ್ನು 243 ವಾರ್ಡ್‌ಗಳಿಗೆ ಏರಿಕೆ ಮಾಡಲಿದೆ. ಪಾಲಿಕೆ ವ್ಯಾಪ್ತಿಗೆ ಹೊಸ ವಾರ್ಡ್‌ಗಳನ್ನು ಸೇರಿಸಲು ಸಮಿತಿ ರಚನೆ ಮಾಡಿದೆ. ಹೊಸ ಹಳ್ಳಿಗಳು ಸೇರ್ಪಡೆಯಾದ ಬಳಿಕ ಮತ್ತೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ.
ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಗಡಿ ಗುರುತಿಸಬೇಕಿದೆ. ಹೊಸ ಹಳ್ಳಿಗಳ ಸೇರ್ಪಡೆ ಕುರಿತು ಸಮಿತಿ ಒಂದು ಬಾರಿ ಮಾತ್ರ ಸಭೆ ನಡೆಸಿದೆ. ಸಮಿತಿ ಗಡಿ ಗುರುತಿಸಿ, ವಾರ್ಡ್ ಪುನರ್ ವಿಂಗಡನೆ ನಡೆದು ಮತದಾರರ ಪಟ್ಟಿ ಪರಿಷ್ಕರಣೆಗೊಂಡು ಮತ್ತೆ ಚುನಾವಣೆ ನಡೆಯಬೇಕಿದೆ.
ಬಿಬಿಎಂಪಿ ಚುನಾವಣೆ ನಡೆದರೆ ಮತ್ತೆ 2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಆಗ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಬೇಕಿದೆ. ಆಗ ಮತ್ತೊಮ್ಮೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ದೊರೆಯಲಿದೆ.
2020ರ ಸೆಪ್ಟೆಂಬರ್ 10ಕ್ಕೆ ಬಿಬಿಎಂಪಿ ಕೌನ್ಸಿಲ್ ಅವಧಿ ಪೂರ್ಣಗೊಂಡಿದೆ. ಬಳಿಕ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಮೇಯರ್, ಉಪ ಮೇಯರ್, ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳೇ ಪಾಲಿಕೆ ಆಡಳಿತ ನೋಡಿಕೊಳ್ಳುತ್ತಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿಯೂ ಪ್ರತಿ ವಾರ್ಡ್‌ಗೆ ಒಬ್ಬರು ನೋಡೆಲ್ ಅಧಿಕಾರಿಗಳನ್ನು ನೇಮಿಸಿ ಆಡಳಿತದ ಬಗ್ಗೆ ಉಸ್ತುವಾರಿ ಮಾಡಲಾಗುತ್ತಿತ್ತು. ಈ ವರ್ಷದಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆಗ ಹೊಸ ಹಳ್ಳಿಗಳು ಸೇರ್ಪಡೆ ಆಗುವುದರಿಂದ ಮತದಾರರ ಸಂಖ್ಯೆ ಏರಿಕೆಯಾಗಲಿದೆ.












Click it and Unblock the Notifications