E-Khata Goodnews: ಬಿಬಿಎಂಪಿಯಿಂದ ಇ-ಖಾತಾ ಪಡೆಯೋದು ಇಷ್ಟೊಂದು ಸುಲಭ !
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಆಸ್ತಿ ಮಾಲೀಕರಿಗೆ ಹಾಗೂ ಬೆಂಗಳೂರಿನ ನಿವಾಸಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಇದೀಗ ಬಿಬಿಎಂಪಿಯು ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್‌ಲೈನ್ ಮೂಲಕ ಇ-ಖಾತಾ ವಿತರಣೆ ವ್ಯವಸ್ಥೆಗೆ ಮುಂದಾಗಿದೆ. ಇದರಿಂದ ಬೆಂಗಳೂರಿನ ನಿವಾಸಿಗಳು ಬಿಬಿಎಂಪಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರ ನಿರ್ದೇಶನದಂತೆ ಬಿಬಿಎಂಪಿ ಈ ಕ್ರಮ ವಹಿಸಿದೆ. ಇದರ ವಿವರ ಇಲ್ಲಿದೆ.
ಬಿಬಿಎಂಪಿಯು ಇದೀಗ ಬೆಂಗಳೂರಿನ ನಿವಾಸಿಗಳಿಗೆ ಹಾಗೂ ಮನೆಮಾಲೀಕರಿಗೆ ವಿಶೇಷ ಯೋಜನೆಯೊಂದನ್ನು ಪರಿಚಯಿಸಲು ಮುಂದಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನೇತೃತ್ವ ಈಚೆಗೆ ಸಭೆ ನಡೆಸಲಾಗಿತ್ತು. ಇದೀಗ ಡಿ.ಕೆ ಶಿವಕುಮಾರ್ ನಿರ್ದೇಶನದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಕ್ಟೋಬರ್ 1ರಿಂದ (1-10-2024) ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್‌ಲೈನ್ ಮೂಲಕ ಇ-ಖಾತಾ ವಿತರಣೆ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಪ್ರಾರಂಭಿಸುತ್ತಿದೆ.

ಇ - ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳು ಈ ರೀತಿ ಇವೆ: ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ (ಲಭ್ಯವಿರುವ ಮಾಹಿತಿಯನ್ನು ಆಧರಿಸಿ) ಕರಡು ಇ-ಖಾತಾವನ್ನು ಆನ್‌ಲೈನ್, www.bbmpeaasthi.karnataka.gov.in ನಲ್ಲಿ (ಮಾಹಿತಿಯನ್ನು) ಸಂಗ್ರಹಿಸಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ, ತಮ್ಮ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸಾರ್ವಜನಿಕರು ತಮ್ಮ ಸ್ವತ್ತಿನ ಅಂತಿಮ ಇ-ಖಾತಾವನ್ನು ಪಡೆಯಲು ಆನ್‌ಲೈನ್‌ಮೂಲಕ ಈ ಕೆಲವು ನಿರ್ದಿಷ್ಟ ಮಾಹಿತಿಗಳನ್ನು ಅಥವಾ ಕರಡು ಇ-ಖಾತಾದಲ್ಲಿರುವ ಅಂಶಗಳನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅವಶ್ಯವಿರುವ ದಾಖಲೆಗಳು: ಆಧಾರ್ ಇ-ಕೆವೈಸಿ, ಸ್ವತ್ತಿನ (ಆಸ್ತಿ) ಜಿ.ಪಿ.ಎಸ್, ಸ್ವತ್ತಿನ ಪೋಟೋ,ಸ್ವತ್ತಿನ ನೋಂದಾಯಿತ ಡಾಕ್ಯುಮೆಂಟೇಷನ್, ಸ್ವತ್ತಿನ ಇ.ಸಿ ದಿನಾಂಕ 01-04-2004 ರಿಂದ ಇಲ್ಲಿಯವೆರೆಗೆ, ಬೆಸ್ಕಾಂ ಮೀಟರ್ ಸಂಖ್ಯೆ ಹಾಗೂ ಎ-ಖಾತಾ ಎಂದು ದೃಢೀಕರಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲಾತಿಗಳು. ಇಲ್ಲಿ ಮುಖ್ಯವಾಗಿ ಸಾರ್ವಜನಿಕರು ಮೇಲಿನ ಯಾವುದೇ ದಾಖಲೆಗಳನ್ನು ಇಲ್ಲದಿದ್ದರೆ, ನಿಯಮಾವಳಂತೆ ಅಂತಿಮ ಇ-ಖಾತಾವನ್ನು ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಭೇಟಿ ಮಾಡಬೇಕಾಗುತ್ತದೆ.
ಇನ್ನು ಸ್ವತ್ತಿನ ಮಾಲೀಕರು ಅಂತಿಮ ಇ- ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ಕರಡು ಇ-ಖಾತಾವನ್ನು ರಚಿಸಿದ 7 ದಿನಗಳವರೆಗೆ ಆಕ್ಷೇಪಣೆ ಅವಧಿಯನ್ನು ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳು ಆಕ್ಷೇಪಣೆಯ ವಿಚಾರಣೆ ಕೈಗೊಂಡು ಅದಕ್ಕೆ ಇ- ಖಾತಾ ನೀಡಬೇಕೇ ಬೇಡವೇ ಎಂದು ನಿರ್ಧರಿಸಲಿದ್ದಾರೆ. ಈ ಪ್ರಕ್ರಿಯೆಗಳು ಮುಗಿತ ನಂತರ ಅಂತಿಮ ಇ-ಖಾತಾವನ್ನು ವಿತರಿಸಲಾಗುತ್ತದೆ. ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಪ್ರತ್ಯೇಕವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.
ಬೃಹತ್ ಸ್ವರೂಪದಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಇದಾಗಿದೆ. ಹೀಗಾಗಿ, ಪರೀಕ್ಷಾರ್ಥವಾಗಿ ಇ - ಖಾತಾ ಪ್ರಾರಂಭಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸುಧಾರಣೆಗಳನ್ನು (ಅವಶ್ಯವಿರುವ ತಿದ್ದುಪಡಿ) ಅಳವಡಿಸಿಕೊಳ್ಳಲಾಗುವುದು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications