E-Khata: ಉತ್ತರ ನಗರ ಪಾಲಿಕೆ ಫೋನ್-ಇನ್ ಕಾರ್ಯಕ್ರಮ: ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ..
ಬೆಂಗಳೂರು, ಅಕ್ಟೋಬರ್ 16: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಪ್ರಮುಖ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರಿಂದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಅಕ್ಟೋಬರ್ 17 ರಂದು (ಶುಕ್ರವಾರ) ಬೆಳಗ್ಗೆ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಗರಿಕರು ಇ-ಖಾತಾ ಸೇರಿದಂತೆ ಈ ಕೆಳಗಿನ ವಿವಿಧ ಸಮಸ್ಯೆಗಳನ್ನು, ದೂರುಗಳನ್ನು ದಾಖಲಿಸಿ ಪರಿಹಾರ ಪಡೆಯಬಹುದಾಗಿದೆ.
ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ತಕ್ಷಣ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ನಾಳೆ ಶುಕ್ರವಾರ ಬೆಳಗ್ಗೆ 07 ರಿಂದ 9 ಗಂಟೆವರೆಗೆ ನೇರ್ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ನಾಗರಿಕರಿಂದ ಬಂದ ಅಹವಾಲುಗಳಿಗೆ ಸ್ಪಂದಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಾಗರಿಕರು ರಸ್ತೆ ಗುಂಡಿಗಳು, ಬೀದಿ ದೀಪಗಳ ದುರಸ್ತಿ, ಕಸ ಸಂಗ್ರಹಣೆ, ಅಪಾಯಕರ ಮರಗಳು ಅಥವಾ ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ, ಬೀದಿ ನಾಯಿಗಳ ತೊಂದರೆ, ಉದ್ಯಾನವನಗಳ ನಿರ್ವಹಣೆ, ಅನಧಿಕೃತ ಬ್ಯಾನರ್ ಹಾಗೂ ಪೋಸ್ಟರ್‌ಗಳ ತೆರವು, ಪಾದಚಾರಿ ಮಾರ್ಗದ ಅತಿಕ್ರಮಣೆ, ಇ-ಖಾತಾ ಸಂಬಂಧಿತ ವಿಚಾರಗಳು, ಮತ್ತು ಚರಂಡಿ ಶುದ್ಧೀಕರಣದ ಬಗ್ಗೆ ತಮ್ಮ ಅಹವಾಲುಗಳನ್ನು ನೀಡಬಹುದು. ಆಯುಕ್ತರಿಂದ ಪರಿಹಾರ ಪಡೆಯಬಹುದು.
ಸಾರ್ವಜನಿಕರ ಎಲ್ಲಾ ದೂರುಗಳು ಸಹಾಯ 2.0 ಪೋರ್ಟಲ್ ಮೂಲಕ ದಾಖಲಾಗಿ, ಸಂಬಂಧಿತ ಅಧಿಕಾರಿಗೆ ತಕ್ಷಣ ವಹಿಸಲಾಗುತ್ತದೆ. ನಾಗರಿಕರಿಗೆ SMS ಮುಖಾಂತರ ದೂರು ಸಂಖ್ಯೆ ಹಾಗೂ ಅಧಿಕಾರಿಯ ಸಂಪರ್ಕ ಮಾಹಿತಿ ಕಳುಹಿಸಲಾಗುತ್ತದೆ. ಮೊಬೈಲ್ ಮತ್ತು ವಾಟ್ಸಪ್: 9480685705 ಸಂಖ್ಯೆಗೆ ಮತ್ತು ಲ್ಯಾಂಡ್‌ಲೈನ್: 080-22975936 / 080-23636671 ಗೂ ಸಂಪರ್ಕಿಸಬಹುದು. ಅದೇ ರೀತಿ, ನಾಗರಿಕರು ತಮ್ಮ ಸಮಸ್ಯೆಗಳನ್ನು ಸಹಾಯ ಮೊಬೈಲ್ ಆಪ್ ಮೂಲಕವೂ ದಾಖಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ 15.42 ಲಕ್ಷ ಮನೆಗಳ ಸಮೀಕ್ಷೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪ್ರಾರಂಭದಿಂದ ಈವರೆಗೆ 15.42 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಬುಧವಾರ (ಅಕ್ಟೋಬರ್ 15) ಒಟ್ಟು 5 ನಗರ ಪಾಲಿಕೆಗಳಲ್ಲಿ ರಾತ್ರಿ 08.30 ಗಂಟೆಯವರೆಗೆ ಅಧಿಕಾರಿಗಳು 1,13,532 ಮನೆಗಳನ್ನು ಸಮೀಕ್ಷೆ ನಡೆಸಿದ್ದರಾರೆ ಎಂದು ಪ್ರಾಧಿಕಾರವು ಅಪ್ಡೇಟ್ ನೀಡಿದೆ.
ಕಳೆದ 12 ದಿನಗಳಲ್ಲಿ ಜಿಬಿಎ 5ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆಯಾದ ಒಟ್ಟು ಮನೆಗಳು- 15,42,997. ಇದರ ಐದು ಪಾಲಿಕೆವಾರು ಮಾಹಿತಿ, ಪಟ್ಟಿ ಇಲ್ಲಿದೆ.
ಪಾಲಿಕೆವಾರು ಸಮೀಕ್ಷೆ ನಡೆಸಿದ ಮಾಹಿತಿ
* ಕೇಂದ್ರ ನಗರ ಪಾಲಿಕೆ : 2,03,538
* ಪೂರ್ವ ನಗರ ಪಾಲಿಕೆ : 2,38,099
* ಉತ್ತರ ನಗರ ಪಾಲಿಕೆ : 3,76,004
* ದಕ್ಷಿಣ ನಗರ ಪಾಲಿಕೆ : 2,80,856
* ಪಶ್ಚಿಮ ನಗರ ಪಾಲಿಕೆ : 4,44,500 ಮನೆಗಳ ಸಮೀಕ್ಷೆ ಆಗಿದೆ.
ಜಾತಿ ಸಮೀಕ್ಷೆ ತ್ವರಿತಗೊಳಿಸಿ
ಇನ್ನೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ತ್ವರಿತಗೊಳಿಸಬೇಕು. ಒಟ್ಟು 11,92,486 ಮನೆಗಳ ಪೈಕಿ 4,48,186 ಮನೆಗಳ ಸಮೀಕ್ಷಾ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಮನೆಗಳ ಸಮೀಕ್ಷೆಯನ್ನು ಶೀಘ್ರ ಪೂರ್ಣಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಯುಕ್ತ ಡಾ. ರಾಜೇಂದ್ರ ಕೆ.ವಿ ನಿರ್ದೇಶನ ನೀಡಿದರು.












Click it and Unblock the Notifications