ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ ಹೋದ ದುನಿಯಾ ವಿಜಯ್
ಬೆಂಗಳೂರು, ಸೆಪ್ಟೆಂಬರ್ 27 : ನಟ ದುನಿಯಾ ವಿಜಯ್ ಜಾಮೀನು ನೀಡುವಂತೆ ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಬುಧವಾರ ವಿಜಯ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಸೆಷನ್ಸ್ ಕೋರ್ಟ್ ಸೆ.29ರಂದು ಅರ್ಜಿಯ ವಿಚಾರಣೆ ನಡೆಸಲಿದೆ.
ದುನಿಯಾ ವಿಜಯ್ ಪರ ವಕೀಲರು ಗುರುವಾರ ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿರುವುದು, ಅಪಹರಣ ಪ್ರಕರಣದಲ್ಲಿ ದುನಿಯಾ ವಿಜಯ್ ಆರೋಪಿಯಾಗಿದ್ದಾರೆ.
ಸೆ.23ರಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ದುನಿಯಾ ವಿಜಯ್ ಅವರನ್ನು ಬಂಧಿಸಿದ್ದರು. ಕೋರ್ಟ್ 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಸೆ.24ರಂದು ದುನಿಯಾ ವಿಜಯ್ ಪರ ವಕೀಲ ಶಿವಕುಮಾರ್ ಅವರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಸೆ.26ಕ್ಕೆ ತೀರ್ಪು ಕಾಯ್ದಿರಿಸಿತ್ತು. ಬುಧವಾರ ಜಾಮೀನು ಅರ್ಜಿ ವಜಾ ಮಾಡಲಾಗಿದೆ.
ಜಾಮೀನಿಗೆ ಆಕ್ಷೇಪ : ದುನಿಯಾ ವಿಜಯ್ ಎಸಿಎಂಎಂ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎನ್.ಅರುಣ್ ಆಕ್ಷೇಪ ವ್ಯಕ್ತಪಡಿಸಿದ್ದರು. ಜಾಮೀನು ನೀಡಿದರೆ ಪುನಃ ಗಲಾಟೆ ನಡೆಯುವ ಸಾಧ್ಯತೆ ಇದೆ. ದುನಿಯಾ ವಿಜಯ್ ಗುಂಪು ಕಟ್ಟಿಕೊಂಡು ಪದೇ-ಪದೇ ಗಲಾಟೆ ಮಾಡುತ್ತಿದ್ದಾರೆ ಎಂದು ವಾದ ಮಂಡಿಸಿದ್ದರು.












Click it and Unblock the Notifications