ಕಸದ ಸಮಸ್ಯೆಗೆ ಸರ್ಕಾರದ ನಿರ್ಲಕ್ಷ್ಯ ಕಾರಣ:ಮೇಯರ್
ಬೆಂಗಳೂರು, ಜೂ.9: ಬಿಬಿಎಂಪಿ ಮನವಿ ಮಾಡಿದಾಗ ಸರ್ಕಾರ ಪರ್ಯಾಯ ಜಾಗ ಕೊಡಲು ನಿರ್ಲಕ್ಷ್ಯವಹಿಸಿದ್ದರಿಂದ ಮಂಡೂರು ಕಸದ ಸಮಸ್ಯೆ ಉಲ್ಭಣವಾಗಿದೆ ಎಂದು ಬೆಂಗಳೂರು ಮೇಯರ್ ಬಿ.ಎಸ್.ಸತ್ಯನಾರಾಯಣ ಹೇಳಿದ್ದಾರೆ.
ನಗರದ ಭಾರತೀಯ ವಿದ್ಯಾ ಭವನದಲ್ಲಿ ಬಿ ಪ್ಯಾಕ್ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಕಸ ಸಮಸ್ಯೆ ನಿವಾರಣೆಗೆ 100 ಎಕರೆ ಜಾಗ ನೀಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದರು.
ಸರ್ಕಾರ ಈಗ ನಾಲ್ಕು ಕಡೆ ಘಟಕೆ ತೆರೆಯಲು ಅನುಮತಿ ನೀಡಿದೆ.ಈ ನಾಲ್ಕು ಯೋಜನೆಗಳು ಆರಂಭವಾಗಲು ಕನಿಷ್ಠ ಆರು ತಿಂಗಳ ಅಗತ್ಯವಿದೆ. ಅಲ್ಲಿಯವರೆಗೂ ಮಂಡೂರಿಗೆ ಕಸ ಸಾಗಣೆ ಮಾಡುವುದನ್ನು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.[ಸಚಿವರ ಮನೆ ಸುತ್ತ ಕಸ ಎತ್ತಿ ಲೋಕಸತ್ತಾ ಪ್ರತಿಭಟನೆ]

ಕಲ್ಯಾಣ ನಗರ ಜನತೆಯ ಕಸ ವಿಲೇವಾರಿ ಕ್ರಮವನ್ನು ಹೊಗಳಿದ ಮೇಯರ್ ಕಸ ವಿಲೇವಾರಿ ಕೆಲಸ ಬಿಬಿಎಂಪಿಯದ್ದು ಎಂಬ ಭಾವನೆ ಜನರಲ್ಲಿ ಮೂಡಿದೆ. ಹಸಿ ಹಾಗೂ ಒಣ ತ್ಯಾಜ್ಯ ಮೂಲದಲ್ಲಿಯೇ ವಿಂಗಡಿಸಿ ನೀಡುವಂತೆ ಮನವಿ ಮಾಡಿದರೂ ಜನ ಸ್ಪಂದಿಸುತ್ತಿಲ್ಲ. ಜನರಲ್ಲೇ ಕಸದ ಸಮಸ್ಯೆ ಬಗ್ಗೆ ಅರಿವು ಮೂಡಬೇಕಿದೆ ಎಂದರು.[ಬೆಂಗಳೂರಿನ ಸೂತ್ರ ಹಿಡಿದವರು ಮಂಡೂರಲ್ಲಿ ವಾಸ್ತವ್ಯ ಹೂಡಲಿ]
ಕಸದ ಸಮಸ್ಯೆ ನಿವಾರಣೆ ಬಗ್ಗೆ ಬೇಜವಾಬ್ದಾರಿ ವಹಿಸಿದ ಬಿಬಿಎಂಪಿ ಅಧಿಕಾರಿಗಳು, ಆರೋಗ್ಯಾಧಿಕಾರಿ ಹಾಗೂ ಪೌರಕಾರ್ಮಿಕರನ್ನು ತರಾಟೆಗೆ ತೆಗೆದುಕೊಳ್ಳುವಂತಿಲ್ಲ. ತರಾಟೆಗೆ ತೆಗೆದುಕೊಂಡರೆ ಜಾತಿ ವಿಷಯ ಪ್ರಸ್ತಾಪಿಸಿ ಹೆದರಿಸುತ್ತಾರೆ. ಇವರ ನಡುವೆ ಕೆಲಸ ಮಾಡುವುದು ಹೇಗೆ ಎಂದು ಮೇಯರ್ ಸತ್ಯನಾರಾಯಣ ಪ್ರಶ್ನಿಸಿದ್ದಾರೆ.












Click it and Unblock the Notifications