Bengaluru Pothole : ಮಳೆಯಿಂದ ಇತ್ತೀಚೆಗೆ ದುರಸ್ತಿ ಕಂಡ ರಸ್ತೆಗಳಲ್ಲಿ ಗುಂಡಿ ಸೃಷ್ಟಿ
ಬೆಂಗಳೂರು, ಡಿಸೆಂಬರ್ 14: ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಈಚೆಗೆ ಬಂದ ತುಂತುರು ಮಳೆಯ ಕಾರಣಕ್ಕೆ ಹಳೆಯ ಹಾಗೂ ಇತ್ತೀಚೆಗೆ ದುರಸ್ತಿ ಮಾಡಿದ್ದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇದು ರಸ್ತೆ ಕಾಮಗಾರಿ ಗುಣಮಟ್ಟ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ.
ಬೆಂಗಳೂರಿನ ಕಾಜಿ ಬಜಾರ್, ನೇತಾಜಿ ರಸ್ತೆ, ನಾಗರಭಾವಿ, ಮೈಸೂರು ರಸ್ತೆಯ ಕೆಲವು ಪ್ರದೇಶಗಳಲ್ಲಿ ರಸ್ತೆಗುಂಡಿ ಬಿದ್ದಿವೆ. ಅಲ್ಲದೇ ಇತ್ತೀಚೆಗಷ್ಟೇ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ಮುಂದೆ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಈಗ ಈರಸ್ತೆಯಲ್ಲಿ ಒಂದು ದೊಡ್ಡ ಹೊಂಡ ಬಿದ್ದಿದೆ.
ನಾಗರಬಾವಿ ಬಡಾವಣೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿಗಳು ಹೆಚ್ಚಿವೆ. ಈ ಭಾಗದ ರಸ್ತೆಗಳನ್ನು ಮೊದಲಿನಿಂದಲೂ ಸಮರ್ಪಕವಾಗಿ ದುರಸ್ತಿ ಮಾಡಲಾಗಿಲ್ಲ. ಬಿಬಿಎಂಪಿಯಿಂದ ಮೂರು ವಾರದಿಂದ ನಾಗರಭಾವಿಯಲ್ಲಿ 80 ಅಡಿ ರಸ್ತೆಯನ್ನು ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಇಲ್ಲಿನ ಕೆಲವು ರಸ್ತೆಗುಂಡಿಗಳನ್ನು ಮಣ್ಣು, ಜಲ್ಲಿಕಲ್ಲಿನಿಂದ ತುಂಬಲಾಗಿದೆ. ಮಳೆಯಿಂದಾಗಿ ಮಣ್ಣು ಕೊಚ್ಚಿಹೋಗಿ ಮತ್ತು ಗುಂಡಿ ನಿರ್ಮಾಣವಾಗಿದೆ. ಕೆಲವೆಡೆ ಕಡೆಗಳಲ್ಲಿ ರಸ್ತೆಗುಂಡಿಗಳು ಇನ್ನೂ ಹಾಗೇಯೆ ಇವೆ.

ಬೀದಿ ವ್ಯಾಪಾರಕ್ಕೂ ತೊಂದರೆ:
ರಸ್ತೆಗುಂಡಿಗಳಿಂದ ಬೀದಿ ಬದಿಗಳಲ್ಲಿರುವ ಸಣ್ಣ ವ್ಯಾಪಾರಿಗಳ ವಹಿವಾಟಿಗೆ ತೊಂದರೆಯಾಗಿದೆ. ಇಷ್ಟು ಕಡಿಮೆ ಮಳೆ ಬಂದರೆ ಸಾಕು ರಸ್ತೆಗಳು ಹಾಳಾಗುತ್ತಿವೆ. ರಸ್ತೆಗುಂಡಿಗಳಿಂದಾಗಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ನಿತ್ಯವು ಅನಿವಾರ್ಯವಾಗಿ ತ್ರಾಸದಾಯಕ ಪ್ರಯಾಣ ಮಾಡಬೇಕಿದೆ ಎಂದು ಮತ್ತೊಬ್ಬ ನಿವಾಸಿ ಅಳಲು ತೋಡಿಕೊಂಡರು.
ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಗುಂಡಿ ದುರಸ್ತಿ ಕಾರ್ಯ ನಡೆಯುತ್ತಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಆಗ ರಸ್ತೆಯ ಬದಿಯಲ್ಲಿ ಹಾಕಲಾದ ನಿರ್ಮಾಣ ವಸ್ತುಗಳು ತೆರವಾಗುತ್ತವೆ. ಸದ್ಯ ಅವುಗಳಿಂದಲೂ ಹೆಚ್ಚು ಸಮಸ್ಯೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.

ನಗರ ಪೊಲೀಸ್ ಇಲಾಖೆ ಜೊತೆಗೂಡಿ ಗುಂಡಿ ಗುರುತಿಸಿ ಮುಚ್ಚುತ್ತಿದ್ದ ಬಿಬಿಎಂಪಿಗೆ ಈಗ ಮಳೆಯು ಸಂಕಷ್ಟ ಒಡ್ಡಿದೆ. ಮತ್ತೆ ರಸ್ತೆಗುಂಡಿಗಳನ್ನು ಗುರುತಿಸಿ ಆದಷ್ಟು ಬೇಗ ದುರಸ್ತಿ ಕಾರ್ಯ ನಡೆಯಬೇಕಿದೆ.












Click it and Unblock the Notifications