ಡಿಸೆಂಬರ್ 31ರ ಸಂಜೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿ, ಬೈಪಾಸ್‌ಗಳು ಬಹುತೇಕ ಬಂದ್: ಕಾರಣ ಏನು ಗೊತ್ತೇ?
ಬೆಂಗಳೂರು, ಡಿಸೆಂಬರ್ 31: ಕಳೆದ ಮೂರು ವರ್ಷಗಳಿಂದ ಹೊಸ ವರ್ಷದ ಸಂಭ್ರಮಾಚರಣೆ ಮಾಡಲಾಗದೇ ಬೆಂಗಳೂರು ಮಹಾನಗರ ಸಪ್ಪೆಯಾಗಿತ್ತು. ಆದರೆ, ಈ ವರ್ಷ ಕೊರೊನಾ ಸೋಂಕಿನ ಆತಂಕ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮ ತಾರಕಕ್ಕೆ ಏರಿದೆ.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್, ರೆಸ್ಟೊರಾಂಟ್, ಶಾಪಿಂಗ್ ಮಾಲ್, ಬಾರ್, ಪಬ್‌ಗಳಲ್ಲಿ ಸಂಭ್ರಮ ಮನೆ ಮಾಡಿದೆ.
ದೇಶದಲ್ಲಿಯೇ ಪ್ರಸಿದ್ಧಿಯಾಗಿರುವ ಬೆಂಗಳೂರಿನ ಹೊಸ ವರ್ಷಚರಣೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಮಂದಿ ನಗರಕ್ಕೆ ಆಗಮಿಸುತ್ತಾರೆ. ಅದರಲ್ಲೂ ಬ್ರಿಗೆಡ್ ರೋಡ್ ಹಾಗೂ ಎಂ.ಜಿ.ರೋಡ್‌ಗಳಲ್ಲಿ ಸಾವಿರಾರು ಯುವಕ-ಯುವತಿಯರು ಸಂಭ್ರಮಾಚಣೆಯಲ್ಲಿ ತೊಡಗುತ್ತಾರೆ.

ಡಿಸೆಂಬರ್ 31ರ ರಾತ್ರಿ ನಡೆಯುವ ಈ ಸಂಭ್ರಮಾಚಣೆಗೆ ಸುತ್ತಲಿನ ಜಿಲ್ಲೆಗಳಿಂದ ಸಾವಿರಾರು ವಾಹನಗಳು ಬರುತ್ತವೆ. ಇದು ಬೆಂಗಳೂರಿನ ಟ್ರಾಪಿಕ್ ಪೊಲೀಸರಿಗೆ ಹರಸಾಹಸದ ರಾತ್ರಿಯೆಂದೇ ಹೇಳಬಹುದು.
ಬೆಂಗಳೂರಿನ ಟ್ರಾಪಿಕ್ ಸಮಸ್ಯೆಯನ್ನು ತಗ್ಗಿಸಲು ಪೊಲೀಸರು ಹೊಸ ಪ್ಲಾನ್ ಒಂದನ್ನು ಮಾಡಿಕೊಂಡಿದ್ದಾರೆ.
ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯ ಬೈಪಾಸ್‌ಗಳಲ್ಲಿ ವಾಹನಗಳ ಓಡಾಟಕ್ಕೆ ಶನಿವಾರ (ಡಿಸೆಂಬರ್ 31) ಸಂಜೆ ನಿರ್ಬಂಧ ಇರಲಿದೆ.

ಈ ಕುರಿತು 'ಪ್ರಜಾವಾಣಿ'ಯೊಂದಿಗೆ ಮಾತನಾಡಿರುವ ರಾಮನಗರ ಎಸ್‌ಪಿ ಸಂತೋಷ್ ಬಾಬು, 'ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ ಬೈಪಾಸ್‌ಗಳಲ್ಲಿ ಶನಿವಾರ ಸಂಜೆ 5.30ರಿಂದ ಭಾನುವಾರ ಬೆಳಿಗ್ಗೆ 4.30ರ ವರೆಗೆ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.
ಬಿಡದಿ ಸಮೀಪದ ಕುಂಬಳಗೋಡು ಫ್ಲೈ ಓವರ್ ಶನಿವಾರ ರಾತ್ರಿ 8ರಿಂದ ಭಾನುವಾರ ಬೆಳಿಗ್ಗೆ 4.30ರ ವರೆಗೆ ಬಂದ್ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರದಾದ್ಯಂತ ಸಾವಿರಾರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಜಾಗಗಳಲ್ಲಿ ಪೊಲೀಸರ ಕಣ್ಗಾವಲು ಹಾಗೂ ಗಸ್ತು ಇರಲಿದೆ. ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್‌ಗಳಲ್ಲಿ ಹೆಚ್ಚಿನ ಭದ್ರತೆ ಇರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋಗಳು, ಬಸ್‌ಗಳು ತಡ ರಾತ್ರಿಗಳಲ್ಲಿ ಓಡಾಡಲಿವೆ. ಮೆಟ್ರೋ ರೈಲುಗಳು ರಾತ್ರಿ 2 ಗಂಟೆಯ ವರೆಗೂ ಇರಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಕುಡಿದು ಟೈಟಾಗುವ ಕಿಡಿಗೇಡಿಗಳನ್ನು ಮನೆಗೆ ತಲುಪಿಸಲು ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ, ಮೂರು ವರ್ಷಗಳ ಕಾಲ ಸಪ್ಪೆಯಾಗಿದ್ದ ಹೊಸ ವರ್ಷದ ಸಂಭ್ರಮಾಚಣೆಯು ಈ ವರ್ಷ ಕಳೆಕಟ್ಟುವುದಂತೂ ಶತಸಿದ್ಧ.












Click it and Unblock the Notifications