BBMP: ಮಡಿವಾಳ ಮಾರುಕಟ್ಟೆಯಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಾಣ, ಕಸ ವಿಲೇವಾರಿಗೆ ಸೂಚನೆ
ಬೆಂಗಳೂರು, ಜುಲೈ 11: ನೂರಾರು ಮಳಿಗೆಗಳು ಇರುವ ನಿತ್ಯ ಸಾವಿರಾರು ಜನ ಸೇರುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಮಡಿವಾಳ ಮಾರುಕಟ್ಟೆಯಲ್ಲಿನ ಒಣ ತ್ಯಾಜ್ಯ ಸಂಗ್ರಹ ಘಟಕ ಆದಷ್ಟು ಶೀಘ್ರವೇ ಸ್ಥಾಪನೆಯಾಗಲಿದೆ.
ಮಡಿವಾಳ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡುವಂತಾಗಬೇಕು. ಅದಕ್ಕಾಗಿ ಮಾರುಕಟ್ಟೆಯಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಕಟವನ್ನು ಸ್ಥಾಪಿಸಿ, ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಸ್ಥಳೀಯ ಮಟ್ಟದಲ್ಲೇ ವಿಲೇವಾರಿ ಮಾಡಬೇಕು. ಪಾಲಿಕೆಯ ನಿಯಮಗಳನ್ನು ಪಾಲಿಸದೇ ಇರುವಂತಹವರಿಗೆ ದಂಡ ವಿಧಿಸಬೇಕೆಂದು ಅಧಿಕಾರಿಗಳಿಗೆ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ಸೂಚನೆ ನೀಡಿದರು.

ನಗರದ ಮಡಿವಾಳ ಮಾರುಕಟ್ಟೆ ಭೇಟಿ ನೀಡಿ ಪರಿಶೀಲಿಸಿದರ. ತ್ಯಾಜ್ಯ ವಿಂಗಡಣೆಯ ಪ್ರಕ್ರಿಯೆ ನಿರ್ವಹಣೆ ಕುರಿತು ತಪಾಸಣೆ ನಡೆಸಿದ ಅವರು, ತ್ಯಾಜ್ಯ ವಿಲೇವಾರಿ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
2018 ರಿಂದಲೂ ತ್ಯಾಜ್ಯ ವಿಂಗಡನೆ ಬಗ್ಗೆ ಜಾಗೃತಿ
ಈ ಮಡಿವಾಳ ಮಾರುಕಟ್ಟೆಯು ಸುಮಾರು 1ಕಿ.ಮೀ ಪ್ರದೇಶದಲ್ಲಿದ್ದು, 405 ಮಳಿಗೆಗಳಿವೆ. ಮಡಿವಾಳ ಮಾರುಕಟ್ಟೆಯಲ್ಲಿ ತ್ಯಾಜ್ಯವನ್ನು ಸರಿಯಾದ ಅನುಕ್ರಮದಲ್ಲಿ ವಿಂಗಡಿಸುವ ಉದ್ದೇಶದಿಂದ ಎನ್.ಜಿ.ಒ ಸಂಸ್ಥೆಗಳಾದ ವೇದನ್ ಟ್ರಸ್ಟ್ ಹಾಗೂ ಎಸ್.ವಿ.ಪಿ ಇಂಡಿಯಾ ಸಂಸ್ಥೆಗಳು ಕಳೆದ 2018 ರಿಂದ ಮಾರಾಟಗಾರರು ಮತ್ತು ಗ್ರಾಹಕರಿಗೆ ತ್ಯಾಜ್ಯ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸಿ ಎಲ್ಲಾ ಮಳಿಗಗಳಲ್ಲಿ ತ್ಯಾಜ್ಯ ಬೇರ್ಪಡಿಸಿ ನೀಡಲು ಟ್ರೇ ವ್ಯವಸ್ಥೆ ಮಾಡಲಾಗಿದೆ.
ಇದೀಗ ಸರಿಯಾದ ಅನುಕ್ರಮದಲ್ಲಿ ತ್ಯಾಜ್ಯ ವಿಂಗಡಣೆ ಮಾಡಲಾಗುತ್ತಿದೆ. ಪ್ರತಿನಿತ್ಯ 10 ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 5 ರಿಂದ 6 ಟನ್ ಹಸಿ ತ್ಯಾಜ್ಯವನ್ನು ಹಸುಗಳನ್ನು ಸಾಕಿರುವಂತಹವರು ಹಾಗೂ ಬಯೋಗ್ಯಾಸ್ ಮಾಡುವವರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ಆಯುಕ್ತರಿಗೆ ಮಾಹಿತಿ ನೀಡಿದರು.
ನಿತ್ಯ ಟನ್‌ಗಟ್ಟಲೇ ತ್ಯಾಜ್ಯ ಉತ್ಪಾದನೆ, ವಿಲೇವಾರಿ
ಸಂಗ್ರಹವಾಗುವ ತ್ಯಾಜದಲ್ಲಿ 4 ಟನ್ ಹಸಿ ತ್ಯಾಜ್ಯವನ್ನು ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಸಾಕಷ್ಟು ಕಡಿಮೆ ಆಗಿದೆ. ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಿ ಎಂದು ಆಯುಕ್ತರು ಹೇಳಿದರು.

ಮಡಿವಾಳ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿ ಜೊತೆಗೆ, ಸದ್ಯ ಮಳೆಗಾಲ ಹಿನ್ನೆಲೆಯಲ್ಲಿ ಸುರಿಯುವ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತವಾದ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆಗಳಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಗ್ರಾಹಕರ ಓಡಾಟಕ್ಕೆ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡು ಅದನ್ನು ಶೀಘ್ರ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ವೇಳೆ ಇಂಜಿನಿಯರಿಂಗ್ ವಿಭಾಗದ ಸಿಬ್ಬಂದಿ, ಕಂದಾಯ ಅಧಿಕಾರಿಗಳು, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಮಾರ್ಷಲ್ ಗಳು ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿವಿ ಪುರಂ ಫುಡ್ ಸ್ಟ್ರೀಟ್ ಕಾಮಗಾರಿ ವೀಕ್ಷಿಸಿದ ಆಯುಕ್ತರ ಪ್ರತಿಕ್ರಿಯೆ
ಇದಕ್ಕೂ ಮುನ್ನ ಬೆಂಗಳೂರಿನ ಪ್ರಮುಖ ಫುಡ್ ಸ್ಟ್ರೀಟ್ ಎನ್ನಲಾಗುವ ವಿವಿಪುರಂ ಫುಡ್ ಸ್ಟ್ರೀಟ್ ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ದಕ್ಷಿಣ ವಲಯ ಆಯುಕ್ತರು ಪರಿಶೀಲನೆ ನಡೆಸಿದರು.
ಈಗಾಗಲೇ ಒಂದಷ್ಟು ಕೆಲಸಗಳು ಪೂರ್ಣಗೊಂಡಿವೆ. ಬಾಕಿ ಉಳಿದ ಇನ್ನಷ್ಟು ಕೆಲಸಗಳು ಮುಂದಿನ ತಿಂಗಳ ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳಲಿವೆ ಎಂದು ಅವರು ತಿಳಿಸಿದರು. ಕಳೆದ ವರ್ಷಾಂತ್ಯಕ್ಕೆ ಈ ಫುಡ್ ಸ್ಟ್ರೀಟ್ (ತಿಂಡಿ ಬೀದಿ) ನಲ್ಲಿ ತಿಂಡಿ ತಿನಿಸುಗಳ ಅಂಗಡಿ ಕಾರ್ಯ ಸ್ಥಗಿತಗೊಂಡಿವೆ. ಈ ತಿಂಡಿ ಬೀದಿಗೆ ಆಧುನಿಕ ಟಚ್ ಕೊಡುವ ಜೊತೆಗೆ ಉತ್ತಮ ಮೂಲ ಸೌಕರ್ಯ ಕಲ್ಪಿಸಲು ಕೊಡಲು ಸರ್ಕಾರ ಒಟ್ಟು ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.
ಆರು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ ಕಾರಣಾಂತರಗಳಿಂದ ತುಸು ತಡವಾಗಿದೆ. ಇನ್ನೇನು ಒಂದು ತಿಂಗಳ ನಂತರ ಫುಡ್ ಸ್ಟ್ರೀಟ್ ಆಹಾರ ಪ್ರೀಯರನ್ನು ಮತ್ತೆ ತನ್ನತ್ತ ಕೈ ಬೀಸಿ ಕರೆಯಲಿದೆ.












Click it and Unblock the Notifications