ಬೆಂಗಳೂರಿನಲ್ಲಿ ರಾಕೆಟ್ ತಯಾರಿಕೆ ಕೇಂದ್ರ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಬೆಂಗಳೂರು, ಸೆಪ್ಟೆಂಬರ್ 27: ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) 208 ಕೋಟಿ ರೂಪಾಯಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ICMF) ಅನ್ನು ಸ್ಥಾಪಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗಾಗಿ ಸ್ಥಾಪಿಸಲಾಗಿರುವ ಕೇಂದ್ರದಲ್ಲಿ ಸಂಪೂರ್ಣ ರಾಕೆಟ್ ಎಂಜಿನ್ ತಯಾರಿಕೆ ನಡೆಸಲಾಗುತ್ತದೆ.
ಅತ್ಯಾಧುನಿಕ ಐಸಿಎಂಎಫ್ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 27ರಂದು ಉದ್ಘಾಟಿಸಲಿದ್ದಾರೆ. 4,500 ಚದರ ಮೀಟರ್ ಜಾಗದಲ್ಲಿ ನಿರ್ಮಿಸಲಾದ ಕೇಂದ್ರವು ಭಾರತೀಯ ರಾಕೆಟ್‌ಗಳಿಗಾಗಿ ಕ್ರಯೋಜೆನಿಕ್ (CE20) ಮತ್ತು ಸೆಮಿ-ಕ್ರಯೋಜೆನಿಕ್ (SE2000) ಎಂಜಿನ್‌ಗಳ ಉತ್ಪಾದನೆಗೆ 70ಕ್ಕೂ ಹೆಚ್ಚು ಹೈಟೆಕ್ ಉಪಕರಣಗಳು ಮತ್ತು ಪರೀಕ್ಷಾ ಸೌಲಭ್ಯಗಳನ್ನು ಹೊಂದಿದೆ.
ಓದಿ ತಿಳಿಯಿರಿ: ಎಚ್ಎಎಲ್ಗೆ ಹೊಡೆತ ಕೊಟ್ಟ ಕೊರೊನಾವೈರಸ್!
ಬೆಂಗಳೂರು ಮೂಲದ ಎಚ್‌ಎಎಲ್ ಪ್ರಕಾರ ಉತ್ಪಾದನೆ ಮತ್ತು ಅಸೆಂಬ್ಲಿ ಅಗತ್ಯಗಳಿಗಾಗಿ ಎಲ್ಲಾ ಯಂತ್ರೋಪಕರಣಗಳ ಕಾರ್ಯಾರಂಭ ಪೂರ್ಣಗೊಂಡಿದೆ. ಇದು ಪ್ರಕ್ರಿಯೆ ಮತ್ತು ಗುಣಮಟ್ಟದ ಯೋಜನೆ ಮತ್ತು ರೇಖಾಚಿತ್ರಗಳ ರಚನೆ ಸೇರಿದಂತೆ ಪೂರ್ವ-ಉತ್ಪಾದನಾ ಚಟುವಟಿಕೆಗಳ ಪ್ರಾರಂಭವನ್ನು ಘೋಷಿಸಿದೆ. ಮಾರ್ಚ್ 2023 ರ ವೇಳೆಗೆ ಮಾಡ್ಯೂಲ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಎಂದು ಹೆಚ್ಎಎಲ್ ಹೇಳಿಕೆಯಲ್ಲಿ ಭರವಸೆ ನೀಡಿದೆ.
ಇಸ್ರೋಗಾಗಿ ಒಂದೇ ಸೂರಿನಡಿ ರಾಕೆಟ್ ತಯಾರಿಕೆ:
"ಈ ಸೌಲಭ್ಯವು (ICMF) ಇಸ್ರೋಗಾಗಿ ಸಂಪೂರ್ಣ ರಾಕೆಟ್ ಎಂಜಿನ್ ತಯಾರಿಕೆಯನ್ನು ಒಂದೇ ಸೂರಿನಡಿ ಪೂರೈಸುತ್ತದೆ. ಈ ಸೌಲಭ್ಯವು ಹೈ-ಥ್ರಸ್ಟ್ ರಾಕೆಟ್ ಎಂಜಿನ್‌ಗಳ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ," ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹೇಳಿಕೆ ತಿಳಿಸಿದೆ.
ಎಚ್‌ಎಎಲ್‌ನ ಏರೋಸ್ಪೇಸ್ ವಿಭಾಗದಲ್ಲಿ ಕ್ರಯೋಜೆನಿಕ್ ಎಂಜಿನ್ ಮಾಡ್ಯೂಲ್‌ಗಳನ್ನು ಉತ್ಪಾದಿಸುವ ಸೌಲಭ್ಯವನ್ನು ಸ್ಥಾಪಿಸಲು 2013ರಲ್ಲಿ ಇಸ್ರೋದೊಂದಿಗೆ ಎಂಒಯುಗೆ ಸಹಿ ಹಾಕಲಾಯಿತು. ನಂತರದಲ್ಲಿ 208 ಕೋಟಿ ಹೂಡಿಕೆಯೊಂದಿಗೆ ICMF ಸ್ಥಾಪನೆಗೆ ಅವಕಾಶ ಕಲ್ಪಿಸಲು 2016ರಲ್ಲಿ ನವೀಕರಿಸಲಾಯಿತು.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV), ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV MK-II), ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV Mk-III), ಮತ್ತು GSLV Mk-II ಗಾಗಿ ಹಂತದ ಏಕೀಕರಣವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಏರೋಸ್ಪೇಸ್ ವಿಭಾಗದಿಂದ ತಯಾರಿಸಲಾಗುತ್ತದೆ.