ಬೆಂಗಳೂರಿನಲ್ಲಿ ವಯೋವೃದ್ಧ ವಿಜ್ಞಾನಿ ದಂಪತಿ ಹತ್ಯೆ

73 ವರ್ಷದ ಪಟ್ಟಾಭಿರಾಮನ್ ನಾಯ್ಡು ಮತ್ತು ಅವರ ಪತ್ರನಿ ಇಂದಿರಾ (67) ಮೃತಪಟ್ಟ ದುರ್ದೈವಿಗಳು. ನಗ, ನಾಣ್ಯ ದೋಚಲು ಈ ಹತ್ಯೆಗಳು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರಾದರೂ ಬೇರೆಯದೇ ಕಾರಣವೂ ಬರಬಹುದಾ? ಎಂದೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭೀಕರವಾಗಿ ಹತ್ಯೆಗೀಡಾಗಿರುವ ಪಟ್ಟಾಭಿರಾಮನ್ ನಾಯ್ಡು ಮನೆಯಲ್ಲಿ ಅಮೂಲ್ಯ ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಪಟ್ಟಾಭಿರಾಮನ್ ಕುಟುಂಬದ ಮೂಲ ತಿರುಪತಿ.
ಮಾರತ್ ಹಳ್ಳಿಯ ನ್ಯೂ ಹೊರೈಝನ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಪಟ್ಟಾಭಿರಾಮನ್ ಅವರ ಪುತ್ರ ಚಂದ್ರಶೇಖರ್ (45) ಅವರು ರಾತ್ರಿ 8 ಗಂಟೆಗೆ ಮನೆಗೆ ಮರಳಿದಾಗ ಹತ್ಯೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಅರೆಬರೆ ಮುಚ್ಚಿದ್ದ ಬಾಗಿಲನ್ನು ದೂಡಿಕೊಂಡು ಒಳಬಂದು ನೋಡಿದಾಗ ಚಂದ್ರಶೇಖರಗೆ ಅವರ ಅಪ್ಪ-ಅಮ್ಮ ಸಾವಿಗೀಡಾಗಿರುವುದು ಅರಿವಿಗೆ ಬಂದಿದೆ.
ವೃದ್ಧ ದಂಪತಿಯನ್ನು ಬಲವಾಗಿ ತಲೆಗೆ ಹೊಡೆದು ಸಾಯಿಸಲಾಗಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂತಕರು ಸುಲಭವಾಗಿ ಮನೆಯೊಳಕ್ಕೆ ಪ್ರವೇಶಿಸಿದ್ದಾರೆ. ಹಾಗಾಗಿ ಪರಿಚಿತರದೇ ಕೈವಾಡವಿರಬಹುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಹತ್ಯೆಗೀಡಾದ ದಂಪತಿ ಆಸ್ತಿ ವಿಷಯದಲ್ಲಿ ಸಮೀಪದ ಬಂಧುಗಳೊಂದಿಗೆ ತಕರಾರು ಹೊಂದಿದ್ದರು. ಜತೆಗೆ, ಪುತ್ರ ಚಂದ್ರಶೇಖರ್ ಸಹ ತನ್ನ ಅಪ್ಪ-ಅಮ್ಮನೊಂದಿಗೆ ವೈಮನಸ್ಯ ಹೊಂದಿದ್ದ ಎಂದು ತಿಳಿದುಬಂದಿದೆ.
ಸುಮಾರು 10 ವರ್ಷಗಳ ಹಿಂದೆ DRDO ಸೇವೆಯಿಂದ ನಿವೃತ್ತಿಯಾಗಿದ್ದ ಪಟ್ಟಾಭಿರಾಮನ್ ನಾಯ್ಡು ರಾಮಮೂರ್ತಿನಗರದ OMBR Layoutನಲ್ಲಿ ಮನೆ ಕಟ್ಟಿಕೊಂಡು ಕೆಳಗಿನ ಮನೆಯಲ್ಲಿ ತಾವಿದ್ದು, ಮೇಲಿನ ಅಂತಸ್ತನ್ನು ಒಂದು ತಿಂಗಳ ಹಿಂದೆ ಬಾಡಿಗೆಗೆ ನೀಡಿದ್ದರು.












Click it and Unblock the Notifications