BBMP: ಕರಡು ಮತದಾರರ ಪಟ್ಟಿ-ಆಕ್ಷೇಪಣೆ ಸಲ್ಲಿಕೆಗೆ ಅಭಿಯಾನ: 'ಛಠ್ ಪೂಜೆ'ಗೆ ಈ ಕೆರೆಯಲ್ಲಿ ವ್ಯವಸ್ಥೆ
ಬೆಂಗಳೂರು, ನವೆಂಬರ್ 16: ಈಗಾಗಲೇ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿ ಕುರಿತಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 09ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸದರಿ ಅವಕಾಶವನ್ನು ಸಾರ್ವಜನಿಕರಿಗೆ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ.
ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ 27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದರು. ಅಂದಿನಿಂದಲೇ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.

ವಿಶೇಷ ನೋಂದಣಿ ಅಭಿಯಾನಗಳನ್ನು ಬಿಬಿಎಂಪಿಯ ಎಲ್ಲಾ ಕಂದಾಯ ಅಧಿಕಾರಿಗಳು/ಸಹ ಕಂದಾಯ ಅಧಿಕಾರಿಗಳು/ ವಾರ್ಡ್ ಕಛೇರಿಗಳು/ಮತಗಟ್ಟೆಗಳಲ್ಲಿ ಆಯೋಜಿಸಲಾಗಿದೆ. ಮತದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಕುರಿತು ಆನ್‌ಲೈನ್ ಮುಖಾಂತರ ಸ್ವಯಂ ಪ್ರೇರಿತವಾಗಿ Web Portal-Voters.eci.gov.in ಅಥವಾ Voter Helpline Mobile App ನಲ್ಲಿ ನೋಂದಾಯಿಸಿಕೊಳ್ಳಬೇಕಿದೆ.
ಮರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಈ ಕೂಡಲೇ ಸಲ್ಲಿಸಬೇಕು. ನೀಡಿರುವ ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲಸೂರು ಕೆರೆಯಲ್ಲಿ ಛಠ್ ಪೂಜೆಗೆ ವ್ಯವಸ್ಥೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದೇ ನವೆಂಬರ್ 19ರಂದು 'ಛಠ್ ಪೂಜೆ' (ಸೂರ್ಯ ದೇವರ ಆರಾಧನೆ) ಕಾರ್ಯಕ್ರಮದ ಸಲುವಾಗಿ ಹಲಸೂರು ಕೆರೆ, ಗಣಪತಿ ವಿಸರ್ಜನೆ ಮಾಡುವ ಕಲ್ಯಾಣಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ 'ಛಠ್ ಪೂಜೆ'ಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಲಸೂರು ಕೆರೆಯ ಉತ್ತರ ದಿಕ್ಕಿನಲ್ಲಿರುವ, ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ (ಕಾರಾ ಕೆಫೆ ರೆಸ್ಟೋರೆಂಟ್ ಮುಂಭಾಗದ) ಮುಖ್ಯ ದ್ವಾರದ ಮೂಲಕವೇ ಬಂದು ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಮಾತ್ರವೇ ಕೈಗೊಳ್ಳೂವಂತೆ ಸೂಚಿಸಲಾಗಿದೆ.
ಈ ಪೂಜೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಪ್ಲಾಸ್ಟಿಕ್ ಪೇಪರ್ ಮುಂತಾದ ವಿಷಯುಕ್ತ ವಸ್ತುಗಳನ್ನು ಕೆರೆಯ ಅಂಗಳಕ್ಕೆ ತರದಂತೆ ಸೂಚಿಸಲಾಗಿದೆ. ಹಲಸೂರು ಕೆರೆಯ ಬೇರೆ ದಿಕ್ಕಿನ ದ್ವಾರಗಳು ಮುಚ್ಚಿರುತ್ತವೆ. ಪೂರ್ವ ವಲಯದ ಬೇರೆ ಯಾವುದೇ ಸ್ಥಳದಲ್ಲಿ ಛಠ್ ಪೂಜೆಗೆ ವ್ಯವಸ್ಥೆ ಕಲ್ಪಿಸಿಲ್ಲ ಎಂಧು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications