ಸಿಎಂ ಪುತ್ರ ಡಾ.ಯತೀಂದ್ರ ಮೇಲೆ ಅವ್ಯವಹಾರದ ತೂಗುಕತ್ತಿ!
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ನೂರಾರು ಕೋಟಿ ಬೇನಾಮಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವರ್ತೂರು ಕನಕದಾಸ ಎನ್ನುವವರು ಆದಾಯ ತೆರಿಗೆ ತನಿಖಾ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು, ಮೇ 08: ನೂರಾರು ಕೋಟಿ ಬೇನಾಮಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವರ್ತೂರು ಕನಕದಾಸ ಎನ್ನುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಆದಾಯ ತೆರಿಗೆ ತನಿಖಾ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ಯತೀಂದ್ರ ಒಡೆತನದ ಮ್ಯಾಟ್ರಿಕ್ ಇಮೇಜಿಂಗ್ ಸಲ್ಯೂಶನ್ಸ್ ಕಂಪೆನಿಯ ವಿರುದ್ಧವೂ ದೂರು ದಾಖಲಿಸಿರುವ ಅವರು, ಬೇನಾಮಿ ಆಸ್ತಿ ವ್ಯವಹಾರಗಳ ಕಾಯ್ದೆ ಅಡಿಯಲ್ಲಿ ತನಿಖೆಗೆ ಆಗ್ರಹಿಸಿದ್ದಾರೆ.[ಅಪ್ಪ ಸಿದ್ದು ಅನುಪಸ್ಥಿತಿಯಲ್ಲಿ ಮಗ ಯತೀಂದ್ರರ ದರ್ಬಾರು!]

ಇಮೇಜಿಂಗ್ ಸಲ್ಯೂಶನ್ಸ್ ಸಂಸ್ಥೆ ವಿಕ್ಟೋರಿಯಾ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಡಯಾಗ್ನೋಸ್ಟಿಕ್ ಘಟಕ ಸ್ಥಾಪಿಸಲು ಟೆಂಡರ್ ಪಡೆದಿರುವ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಬಳಸಲಾಗಿದೆ ಎಂಬ ಬಗ್ಗೆಯೂ ಈ ಮೊದಲು ವಿವಾದವೆದ್ದಿತ್ತು. ಇದೀಗ ವರ್ತೂರು ಕನಕದಾಸ ಅವರು ಡಾ.ಯತೀಂದ್ರ ಅವರ ಮೇಲೆ ಇನ್ನೊಂದು ದೂರು ನೀಡಿರುವುದು ಯತೀಂದ್ರ ಅವರ ರಾಜಕೀಯ ಜೀವನದ ಮೇಲೆ ಪ್ರಭಾವ ಬೀರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಇದುವರೆಗೂ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸದಿದ್ದ ಡಾ.ಯತೀಂದ್ರ ಮೈಸೂರಿನಲ್ಲಿ ಆಗಾಗ ರಾಜಕೀಯ ಸಭೆಗಳನ್ನು ಏರ್ಪಡಿಸುತ್ತಿರುವ ಬಗ್ಗೆ ಕಾಂಗ್ರೆಸ್ ಪಾಳೆಯದಲ್ಲೇ ಅಸಮಾಧಾನ ಎದ್ದಿತ್ತು. ಈ ವಿವಾದವನ್ನು ತಣ್ಣಗಾಗಿಸುವ ಉದ್ದೇಶದಿಂದ ಡಾ.ಯತೀಂದ್ರ ಅವರನ್ನು ವರುಣಾ ವಿಧಾನಸಭಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತಿ ಸಮಿತಿ ಅಧ್ಯಕ್ಷರನ್ನಾಗಿ ಇತ್ತೀಚೆಗಷ್ಟೇ ಸಿದ್ದರಾಮಯ್ಯ ನೇಮಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications