ಬೆಂಗಳೂರಿನ ಕಸದ ಸಮಸ್ಯೆ : ಗ್ರಾಮಸ್ಥರೊಂದಿಗೆ ಸಿದ್ದರಾಮಯ್ಯ ಸಭೆ
ಬೆಂಗಳೂರು, ನವೆಂಬರ್ 06 : ಬೆಂಗಳೂರಿನ ಕಸವನ್ನು ತಂದು ಸುರಿಯಬಾರದು ಎಂದು ಪ್ರತಿಭಟನೆ ನಡೆಸುತ್ತಿರುವ ದೊಡ್ಡಮಂಕಲಾಳದ ಗ್ರಾಮಸ್ಥರ ಜೊತೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಕಸ ತಂದು ಸುರಿಯುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರು ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯುತ್ತಿರುವ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ, ಸಚಿವರಾದ ರೋಷನ್ ಬೇಗ್, ಕೃಷ್ಣಬೈರೇಗೌಡ ಮುಂತಾದವರು ಪಾಲ್ಗೊಂಡಿದ್ದಾರೆ. [ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಮಂಕಲಾಳ ಗ್ರಾಮಸ್ಥರ ಜೊತೆ ಬುಧವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ ನಡೆಸಿದ ಮಾತುಕತೆ ವಿಫಲವಾಗಿತ್ತು. ಸದ್ಯ, ಘಟಕಕ್ಕೆ ಕಸ ಸಾಗಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. [ಕಸದ ಲಾರಿ ಬಿಂಗೀಪುರಕ್ಕೆ ಬರೋಲ್ಲ ಮೇಯರ್ ಭರವಸೆ]
'2015ರ ಡಿಸೆಂಬರ್ ಅಂತ್ಯದ ನಂತರ ಹಂತ ಹಂತವಾಗಿ ಘಟಕಕ್ಕೆ ಕಸ ತರುವುದನ್ನು ಕಡಿಮೆ ಮಾಡಲಾಗುವುದು. ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು' ಸಚಿವ ಕೆ.ಜೆ.ಜಾರ್ಜ್ ನೀಡಿದ್ದ ಭರವಸೆಗೆ ಗ್ರಾಮಸ್ಥರು ಒಪ್ಪಿಗೆ ಕೊಟ್ಟಿರಲಿಲ್ಲ. [ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]
ದೊಡ್ಡಮಂಕಲಾಳ ಘಟಕದ ಸಾಮರ್ಥ್ಯ 400 ಟನ್. ಆದರೆ, ಪ್ರತಿ ದಿನ ಬಿಬಿಎಂಪಿ 1,600 ಟನ್ ಕಸ ತಂದು ಸುರಿಯುತ್ತಿದೆ. ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.












Click it and Unblock the Notifications