ಮತಗಟ್ಟೆಯಲ್ಲಿ ವೈದ್ಯರಿಂದ 'ಹೃದಯ' ಸ್ಪರ್ಷಿ ಕಾರ್ಯ: ಗೋಲ್ಡನ್ ಕ್ಷಣಗಳಲ್ಲಿ ಉಳಿಯಿತು ಜೀವ
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆಯುತ್ತಿದ್ದು, ಬೆಂಗಳೂರಿನ ಮತಗಟ್ಟೆಯಲ್ಲಿ ವೈದ್ಯರ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬರು ಜೀವ ಉಳಿದಿದೆ.
ಹೌದು, ಬೆಂಗಳೂರಿನಲ್ಲಿ ಮತದಾನ ಮಾಡಲು ಬಂದಾಗ ಹೃದಯಾಘಾತದಿಂದ ಬಳಲುತ್ತಿದ್ದ ಮಹಿಳೆಗೆ ತ್ವರಿತಗತಿಯಲ್ಲಿ ವೈದ್ಯರು ಸ್ಪಂದಿಸಿದ್ದಾರೆ. ಕಾರಣ ಸಾವಿನಂಚಿನಲ್ಲಿದ್ದ ಮಹಿಳೆಯ ಜೀವ ಉಳಿದಿದೆ.

ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂಸವಾರಿ ದಿನ್ನೆಯಲ್ಲಿ ಮತದಾನ ಮಾಡಲು ಮತದಾರರು ಆಗಮಿಸಿದ್ದರು. ಈ ವೇಳೆ ಆ ಮಹಿಳೆ ಮತ್ತು ವೈದ್ಯರು ಸಹ ಮತದಾನಕ್ಕೆಂದು ಆಗಮಿಸಿದ್ದರು. ಮತದಾನ ಮಾಡಲು ಎಲ್ಲರಂತೆ 50 ವರ್ಷದ ಆಸುಪಾಸು ವಯಸ್ಸಿನ ಮಹಿಳೆ ತಾಳ್ಮೆಯಿಂದ ಕಾಯುತ್ತಿದ್ದರು.
ತಾವೇ ತಂದಿದ್ದ ಕ್ಯಾನಿನಲ್ಲಿ ನೀರು ಕುಡಿಯಲು ಮುಂದಾದರು. ಈ ವೇಳೆ ತ್ರಾಣವಿಲ್ಲದೇ ಅಸ್ವಸ್ಥರಾಗಿ ಕುಸಿದರು. ಈ ವೇಳೆ ಅದೇ ಮಗಗಟ್ಟೆಯಲ್ಲಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗ್ಗೆ 9 ಗಂಟೆ ಘಟನೆ: ಜೀವ ಉಳಿಸಿದ ವೈದ್ಯ
ಇಂದು ಬೆಳಗ್ಗೆ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಸಿದು ಬೀಳುತ್ತಿದ್ದ ಮಹಿಳೆಯನ್ನು ಅಲ್ಲಿಯೇ ನಿಂತಿದ್ದವರು ಕೈ ಹಿಡಿದು ಆಸರೆಯಾದರು. ಈ ವೇಳೆ ವೈದ್ಯ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು, ಮಹಿಳೆಯ ನಾಡಿ ಮಿಡಿತ ಪರಿಶೀಲಿಸಿದ್ದಾರೆ. ಈ ವೇಳೆ ನಾಡಿಮಿಡಿ ತೀರಾ ಕಡಿಮೆ ಆಗಿದೆ. ಕಣ್ಣುಗಳನ್ನು ಮೇಲಕ್ಕೆ ಮಾಡಿ ಕುಸಿದ ಮಹಿಳೆಯು ಯಾರಿಗೂ ಸ್ಪಂದಿಸಲಿಲ್ಲ.
ಆ ಮಹಿಳೆಗೆ ಉಸಿರುಗಟ್ಟುವ ಸ್ಥಿತಿಯಲ್ಲಿದ್ದದ್ದು ಕಂಡು ನಾನು ತಕ್ಷಣವೇ ಅವರಿಗೆ CPR (ಹೃದಯ ಶ್ವಾಸಕೋಶದ ಪುನರುಜ್ಜೀವನ) ಮಾಡಿದೆ. ಕೂಡಲೇ ಅವರ ದೇಹ ಸ್ಪಂದಿಸಿದ್ದು, ಅವರ ಆರೋಗ್ಯ ಮರಳಿ ಯಥಾಸ್ಥಿತಿಗೆ ಮರಳಿತು ಎಂದು ವೈದ್ಯರು ಮಾಹಿತಿ ನೀಡಿದರು.
ಮಹಿಳೆಗೆ ಕುಸಿಯುತ್ತಿದ್ದಂತೆ ಮತಗಟ್ಟೆಯಲ್ಲಿ ನಿಯೋಜನೆಗೊಂಡಿದ್ದ ಚುನಾವಣಾ ಕರ್ತವ್ಯದಲ್ಲಿದ್ದವರು ಸಹಾಯಕ್ಕೆ ಧಾವಿಸಿದರು. ಮಹಿಳೆಗೆ ಜ್ಯೂಸ್ ನೀಡಿದರು. ಆಂಬ್ಯುಲೆನ್ಸ್ ಅನ್ನು ಕರೆಯಲಾಯಿತು. ಐದೇ ನಿಮಿಷದಲ್ಲಿ ಬಂದ ಆಂಬುಲೆನ್ಸ್‌ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇಂತಹ ಸಂದರ್ಭದಲ್ಲಿ ಒಂದೊಂದು ಕ್ಷಣ ಕ್ಷಣವು ಬಹಳ ಮುಖ್ಯವಾಗುತ್ತದೆ. ಅನಾರೋಗ್ಯ ಘಟನೆಯಿಂದಾಗಿ ಅವರು ಮತದಾನ ಮಾಡಲಾಗಲಿಲ್ಲ. ಈ ಕುರಿತ ವಿಡಿಯೋವನ್ನು TNIE ವರದಿಗಾರರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಮತದಾನ ಮಾಡಿ ವೃದ್ಧೆ ಸಾವು
ಇನ್ನೂ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ವೃದ್ಧ ಮಹಿಳೆಯೊಬ್ಬರು ಮತದಾನ ಮಾಡಿದ ಬಳಿಕ ಮೃತಪಟ್ಟಿದ್ದಾರೆ. 80 ವರ್ಷದ ವೃದ್ಧ ಮಹಿಳೆಯೊಬ್ಬರು ಹತ್ತಿರದ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಮನೆಗೆ ವಾಪಾಸಾದರು. ನಂತರ ಕೆಲವೇ ಕ್ಷಣಗಳಲ್ಲಿ ಅವರು ನಿಧನರಾದರು ಎಂದು ತಿಳಿದು ಬಂದಿದೆ.












Click it and Unblock the Notifications