ನವೆಂಬರ್ 19ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ನಿಶ್ಚಿತಾರ್ಥ
ಬೆಂಗಳೂರು, ನವೆಂಬರ್ 18: ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ಧಾರ್ಥ ಹೆಗ್ಡೆ ಪುತ್ರ ಅಮರ್ಥ್ಯ ಹೆಗ್ಡೆಗೆ ನವೆಂಬರ್ 19 ರಂದು ನಿಶ್ಚಿತಾರ್ಥ ನೆರವೇರಲಿದೆ.
ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಹೋಟೆಲ್‍ವೊಂದರಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಡಿ.ಕೆ ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಡಿ.ಕೆ ಶಿವಕುಮಾರ್ ಮತ್ತು ಸಿದ್ಧಾರ್ಥ್ ಆತ್ಮೀಯ ಸ್ನೇಹಿತರು ಮಾತ್ರವಲ್ಲ, ಉದ್ಯಮದಲ್ಲಿ ಪಾಲುದಾರರು ಕೂಡ. ಸಿದ್ಧಾರ್ಥ್ ಮಾವ ಅಂದರೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಶಿವಕುಮಾರ್ ಗೆ ಹಿಂದೆ ರಾಜಕೀಯ ಗುರುವಾಗಿದ್ದವರು. ಹೀಗಾಗಿ ಎಸ್ಎಂ ಕೃಷ್ಣ ಅವರ ಮೊಮ್ಮಗನೊಂದಿಗೆ ಶಿವಕುಮಾರ್ ಪುತ್ರಿ ವಿವಾಹ ನಿಶ್ಚಯವಾಗಿದೆ.
ಕಾಂಗ್ರೆಸ್ ಪಕ್ಷವನ್ನು ಎಸ್.ಎಂ. ಕೃಷ್ಣ ಅವರು ತೊರೆದ ಮೇಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಸ್‌ಎಂಕೆ ಸಂಪರ್ಕ ಕಡಿದುಕೊಂಡಿರಲಿಲ್ಲ. ಎಸ್‌ಎಂಕೆ ಅಳಿಯ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ಎಸ್‌ಎಂಕೆ ಅವರಿಗೆ ಧೈರ್ಯ ತುಂಬಿದ್ದು ಇದೇ ಡಿಕೆಶಿ. ಇದೀಗ ರಾಜಕೀಯ ಗುರುವಿನ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ರಾಜ್ಯದ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ವೈವಾಹಿಕ ಸಂಬಂಧ ಬೆಳೆಸಿವೆ.
ಕಾಫಿ ಡೇ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ತೆರಿಗೆ ಅಧಿಕಾರಿಗಳ ಒತ್ತಡವನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಸೂಸೈಡ್ ನೋಟ್ನಲ್ಲಿ ವಿ.ಜಿ. ಸಿದ್ದಾರ್ಥ ಬರೆದಿದ್ದರು. ಅದರಂತೆ ನೂತನವಾಗಿ ರಚಿತವಾದ ಕಾಫಿ ಬೋರ್ಡ್ ಮಂಡಳಿಯು ಇದೇ ಸೂಸೈಡ್ ನೋಟ್ ವಿಚಾರಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು.

ತಂದೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅಮರ್ಥ್ಯ
ಅಮರ್ಥ್ಯ ಕಾಫಿ ಡೇ ಸಿದ್ಧಾರ್ಥ ಅವರ ಹಿರಿಯ ಪುತ್ರನಾಗಿದ್ದು ತಂದೆ ಮೃತಪಟ್ಟ ನಂತರ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜು
ಐಶ್ವರ್ಯಾ ತನ್ನ ತಂದೆ ನಡೆಸುತ್ತಿರುವ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ.

ಜೂನ್ 12 ರಂದು ಎಸ್‌ಎಂ ಕೃಷ್ಣ ನಿವಾಸದಲ್ಲಿ ಮಾತುಕತೆ
ಜೂನ್ 12ರಂದು ಡಿ.ಕೆ.ಶಿವಕುಮಾರ್ ಕುಟುಂಬದವರು ಸದಾಶಿವನಗರದ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು. ಕಳೆದ ಒಂದು ತಿಂಗಳಿಂದಲೂ ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಅಮರ್ಥ್ಯ ಸುಬ್ರಮಣ್ಯ ವಿವಾಹ ಸಂಬಂಧ ಎರಡು ಕುಟುಂಬಗಳು ಮಾತುಕತೆ ನಡೆಸುತ್ತಲೇ ಇದ್ದವು. ಆದರೆ ಇಂದು ಡಿಕೆಶಿ ನಿವಾಸದಲ್ಲೇ ಸರಳ ಕಾರ್ಯಕ್ರಮದಲ್ಲಿ ಹಾರವನ್ನು ಬದಲಿಸುವ ಮೂಲಕ ಮದುವೆ ನಿಶ್ಚಯ ಮಾಡಿಕೊಂಡಿದ್ದರು.
Recommended Video

ಎಸ್ಎಂ ಕೃಷ್ಣ ನಿವಾಸಕ್ಕೆ ಡಿಕೆಶಿ ಕುಟುಂಬ ಭೇಟಿ
ಎಸ್ಎಂ ಕೃಷ್ಣ ನಿವಾಸಕ್ಕೆ ಡಿಕೆಶಿ ಕುಟುಂಬ ಭೇಟಿ ನೀಡಿತ್ತು. ಇಂದು ಗುರು-ಹಿರಿಯ ಸಮ್ಮಖದಲ್ಲಿ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಾ ಅವರ ಮದುವೆ ಕುರಿತು ಮಾತುಕತೆ ನಡೆಸಿದ್ದರು.












Click it and Unblock the Notifications