Hebbal Flyover: ಬೆಂಗಳೂರಿನ ಹೊಸ ಫ್ಲೈಓವರ್ ಮೇಲೆ ಡಿ ಕೆ ಶಿವಕುಮಾರ್ ಸ್ಕೂಟರ್ ಸವಾರಿ: ಬಿಗ್ ಅಪ್‌ಡೇಟ್ ಕೊಟ್ಟ ಡಿಸಿಎಂ
ಬೆಂಗಳೂರು,ಆಗಸ್ಟ್ 05: ಹೆಬ್ಬಾಳ ಬಳಿ ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಬ್ಬಾಳದ ಹೊಸ ಮೇಲ್ಸೇತುವೆ ಮೇಲೆ ಸ್ಕೂಟರ್ ಸ್ಕೂಟರ್ ರೈಡ್ ಮಾಡಿ ಖುಷಿ ಪಟ್ಟರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಾರ್ಯಕರ್ತರೊಬ್ಬರ ಡಿಯೋ ಸ್ಕೂಟರ್ ಅನ್ನು ತಾವೇ ಓಡಿಸಿಕೊಂಡು ಹೊಸ ಫ್ಲೈಓವರ್ ಮೇಲೆ ಒಂದು ರೌಂಡ್ ಹೋಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಮೇಲ್ಸೇತುವೆ ಕಾಮಗಾರಿಯನ್ನು ಸಚಿವರಾದ ಬೈರತಿ ಸುರೇಶ್ ಅವರು, ಶಾಂತಿನಗರ ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಎನ್.ಎ.ಹ್ಯಾರಿಸ್ ಅವರು ಮತ್ತು ಅಧಿಕಾರಿಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಆಗಸ್ಟ್ 15 ರ ಒಳಗೆ ಮುಖ್ಯಮಂತ್ರಿಯವರ ದಿನಾಂಕ ಪಡೆದು ಉದ್ಘಾಟನೆ ಮಾಡಲಾಗುವುದು. ಈಗ ಕೆ.ಆರ್ ಪುರಂ ನಿಂದ ಮೇಖ್ರಿ ವೃತ್ತದ ಕಡೆ ಮಾತ್ರ ಲೋಕಾರ್ಪಣೆ ಮಾಡಲಾಗುವುದು. ಇನ್ನೊಂದು ಭಾಗದ ಮೇಲ್ಸೇತುವೆಯನ್ನು ಆನಂತರ ಮಾಡಲಾಗುವುದು. ಹೆಬ್ಬಾಳ ನಾಗಾವರ ಕಡೆ ಎಸ್ಟೀಮ್ ಮಾಲ್ ನಿಂದ ವಿಶ್ವವಿದ್ಯಾಲಯದ ತನಕ ಹೊಸ ಟನಲ್ ರಸ್ತೆ ಮಾಡಲಾಗುವುದು. ಇದನ್ನು ಸಧ್ಯದಲ್ಲೇ ಸಂಚಿವ ಸಂಪುಟದ ಮುಂದೆ ಮಂಡಿಸಲಾಗುತ್ತದೆ. ಮುಖ್ಯ ಟನಲ್ ರಸ್ತೆ ಬೇರೆ, ಈ 1.5 ಕಿಮೀ ಉದ್ದದ ಟನಲ್ ರಸ್ತೆ ಬೇರೆ ಇರಲಿದೆ. ಇದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ಆದರೆ ಕೇವಲ ಮೂರೇ ಮೆಟ್ರೋ ರೈಲುಗಳಿವೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಕೆಲವು ಕಾರಣಾಂತರಗಳಿಂದ ರೈಲುಗಳು ಬಂದಿಲ್ಲ. ಚೀನಾದಿಂದ ಒಂದಷ್ಟು ರೈಲುಗಳನ್ನು ತೆಗೆದುಕೊಂಡಿದ್ದರು. ಆದರೆ ಅದರಲ್ಲಿ ಒಂದಷ್ಟು ತೊಡಕುಗಳಿವೆ. ಈಗ ಇಟಾನಗರ ಸೇರಿದಂತೆ ಇತರೆಡೆಯಿಂದ ರೈಲುಗಳು ಬರಬೇಕು. ಅಲ್ಲಿಂದ ಬಂದ ನಂತರ ರೈಲು ಕಾರ್ಯಾಚರಣೆ ಅವಧಿ ಹೆಚ್ಚಳ ಮಾಡಲಾಗುವುದು ಎಂದರು. ಈ ಮಾರ್ಗ ಸಂಪೂರ್ಣಗೊಳ್ಳಲು ದುಡಿದ ಎಲ್ಲಾ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರನ್ನು ರಾಜ್ಯ ಸರ್ಕಾರದವತಿಯಿಂದ ಅಭಿನಂದಿನೆ ತಿಳಿಸುತ್ತೇನೆ. ಈ ಹಿಂದಿನ ಎಂಡಿಯವರಾದ ಮಹೇಶ್ವರ್ ರಾವ್ ಅವರು ಹಾಗೂ ಅನೇಕ ಸಿಬ್ಬಂದಿ ಇದಕ್ಕಾಗಿ ದುಡಿದಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿ, ಇಡೀ ದೇಶದ ಎಲ್ಲಾ ಭಾಗದ ಜನ, ಗ್ರಾಮೀಣ ಭಾಗದ ಜನ ಎಲ್ಲರೂ ಇಲ್ಲಿಗೆ ಬರುತ್ತಿದ್ದಾರೆ. ಒಳ್ಳೆ ವಾತಾವರಣ, ಕಾವೇರಿ ನೀರು, ಉತ್ತಮ ಸಂಸ್ಥೆಗಳಿವೆ, ನೀವೇ ಬೆಂಗಳೂರು ಬಿಟ್ಟು ಹೋಗುತ್ತಿಲ್ಲ. ಮೆಟ್ರೋ ನಿಲ್ದಾಣ ಇರುವ ಕಡೆ ವಾಹನ ನಿಲ್ದಾಣಗಳಿಗೂ ಹೆಚ್ಚುವರಿ 3-4 ಎಕರೆ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಮೆಟ್ರೋ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೇನೆ.ಕೆಳಗೆ ನಿಲ್ದಾಣ ಮಾಡಿ ಮೇಲೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಿ ಎಂದರು.
ಬೆಂಗಳೂರಿನ ರಸ್ತೆಗಳನ್ನು ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, ಮಾಡಲಾಗುತ್ತಿದೆ, ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಮಾಡಿದರು ಸಾಲದು. ಅಧಿವೇಶನದ ವೇಳೆ ಇದರ ಬಗ್ಗೆ ಮಾತನಾಡುವೆ. ಅಧಿಕಾರಿಗಳಿಗೆ ಒಂದಷ್ಟು ಡೆಡ್ ಲೈನ್ ನೀಡಿದ್ದೇವೆ ಎಂದರು.












Click it and Unblock the Notifications