DK Shivakumar: ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ, ಬ್ಯಾನರ್-ಫ್ಲೆಕ್ಸ್ ಹಾಕಬೇಡಿ
ಮೇ 15ರಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬ. ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಡಿಕೆಶಿ 63ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಪಾರ ಬೆಂಬಲಿಗರು ಹಾಗೂ ಅಭಿಮಾನಿ ಬಳಗವನ್ನು ಹೊಂದಿರುವ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿಯೂ ಅವರ ಹುಟ್ಟುಹಬ್ಬವನ್ನು ಇನ್ನೂ ವಿಜೃಂಭಣೆಯಿಂದ ಮಾಡಬೇಕು ಎಂದು ಅವರ ಬೆಂಬಲಿಗರು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಹೊತ್ತಿನಲ್ಲೇ ಡಿ.ಕೆ ಶಿವಕುಮಾರ್ ಅವರು ದೊಡ್ಡ ಶಾಕ್ ನೀಡಿದ್ದಾರೆ.
ಹುಟ್ಟುಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗಲೇ ಡಿಕೆ ಶಿವಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಕಹಿಸುದ್ದಿ ನೀಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡದಿರಲು ಅವರು ನಿರ್ಧರಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಇದು ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಸಂದರ್ಭ. ಹೀಗಾಗಿ ಮೇ 15ರಂದು ಗುರುವಾರ ಯಾರೂ ನನ್ನ ಜನ್ಮದಿನವನ್ನು ಆಚರಣೆ ಮಾಡುವುದು ಬೇಡ ಎಂದು ವಿನಂತಿ ಮಾಡುತ್ತೇನೆ. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ಅದುವೇ ನನಗೆ ಶ್ರೀರಕ್ಷೆ ಎಂದು ಮನವಿ ಮಾಡಿದ್ದಾರೆ.

ಪ್ರೀತಿಯ ಸ್ನೇಹಿತರು, ಹಿತೈಷಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೇ, ನಾನು ಮೇ 15ರಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಹಾಗಾಗಿ ನನ್ನನ್ನು ಭೇಟಿ ಮಾಡಲು ಯಾರೂ ನನ್ನ ನಿವಾಸಕ್ಕಾಗಲಿ, ಕಚೇರಿಗಾಗಲಿ ಬರಬೇಡಿ, ಯಾರೂ ಇದನ್ನು ಅನ್ಯತಾ ಭಾವಿಸಬೇಡಿ. ಜನ್ಮದಿನದ ಪ್ರಯುಕ್ತ ಯಾವುದೇ ಫ್ಲೆಕ್ಸ್, ಬ್ಯಾನರ್ ಹಾಕಬೇಡಿ, ಜಾಹೀರಾತು ಕೊಡಬೇಡಿ ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ. ನೀವು ಇರುವ ಜಾಗದಿಂದಲೇ ನನಗೆ ಶುಭ ಹಾರೈಸಿ, ಆಶೀರ್ವದಿಸಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾರಾಜಿಸುತ್ತಿವೆ ಬ್ಯಾನರ್, ಕಟೌಟ್‌ಗಳು
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ನಗರದಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕುವುದನ್ನು ಬ್ಯಾನ್ ಮಾಡಿರುವುದಾಗಿ ಹೇಳುತ್ತಲೇ ಇದ್ದಾರೆ. ಇತ್ತೀಚೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರ ಪದಗ್ರಹಣ ಕಾರ್ಯಕ್ರಮದ ವೇಳೆಯೂ ರಾತ್ರೋರಾತ್ರಿ ಬೃಹದಾಕಾರದ ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸಿದ್ದವು. ಇದಕ್ಕೆ ಗರಂ ಆಗಿದ್ದ ಡಿಕೆ ಶಿವಕುಮಾರ್ ಅವರು ಯುವ ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿದ್ದರು. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದರು. ಇದಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಆದರೆ, ಈಗಲೂ ಅವರು ತಮ್ಮ ಹುಟ್ಟುಹಬ್ಬಕ್ಕೆ ಯಾವುದೇ ಬ್ಯಾನರ್, ಫ್ಲೆಕ್ಸ್ ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅವರ ಹುಟ್ಟುಹಬ್ಬಕ್ಕೂ ಮುನ್ನವೇ ಅವರ ನಿವಾಸವಿರುವ ಸದಾಶಿವನಗರ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಆಗಲೇ ಡಿ.ಕೆ.ಶಿವಕುಮಾರ್ ಅವರ ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಬಳ್ಳಾರಿ ರಸ್ತೆ, ಅರಮನೆ ರಸ್ತೆ, ಮೇಕ್ರಿ ಸರ್ಕಲ್, ಹೆಬ್ಬಾಳ ಸೇರಿದಂತೆ ಹಲವು ರಸ್ತೆಯುದ್ದಕ್ಕೂ ಡಿಕೆಶಿ ಬರ್ತ್‌ಡೇಗೆ ವಿಶ್ ಮಾಡುವ ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಮೇಕ್ರಿ ವೃತ್ತದಲ್ಲಿ ಡಿ.ಕೆ.ಶಿವಕುಮಾರ್ ಅವರ ದೊಡ್ಡ ಕಟೌಟ್‌ಗಳನ್ನು ಕೂಡ ನಿಲ್ಲಿಸಲಾಗಿದೆ. ಈ ಬಗ್ಗೆಯೂ ಡಿಸಿಎಂ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications