Bengaluru Second Airport: ಬೆಂಗಳೂರು ಬಿಟ್ಟು ಬೇರೆ ಕಡೆ ಏರ್‌ಪೋರ್ಟ್ ಯಾಕೆ ಬೇಕು?: ಕಾರಣ ತಿಳಿಸಿದ ಡಿ ಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣ ಆಗಲಿದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ರಾಜ್ಯದ ಮೂರು ಸ್ಥಳಗಳನ್ನ ಆಯ್ಕೆ ಮಾಡಿ ಪ್ರಸ್ತಾವನೆಯನ್ನ ಕಳುಹಿಸಿತ್ತು. ಇದೀಗ ತಜ್ಞರ ಸಮಿತಿ ರಾಜ್ಯ ಭೇಟಿಯ ಸಂದರ್ಭದಲ್ಲಿ 3 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ನಡುವೆ ನೆಲಮಂಗಲ ಹಾಗೂ ಕನಕಪುರದಲ್ಲಿ ಬೇಡ ಎಂದು ಟಿಬಿ ಜಯಚಂದ್ರ ನೇತೃತ್ವದಲ್ಲಿ ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರವನ್ನೂ ಬರೆದಿದ್ದಾರೆ. ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಏರ್ ಪೋರ್ಟ್ ನಿರ್ಮಾಣದ ಕುರಿತು ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ಬಿಟ್ಟು ಬೇರೆ ಕಡೆ ಎರಡನೇ ವಿಮಾನ ನಿಲ್ದಾಣವಾಗಲಿ ಎಂದು ಒಂದಷ್ಟು ಶಾಸಕರು ಪತ್ರ ಬರೆದಿರುವ ಕುರಿತು ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನನಗೆ ಈ ಬಗ್ಗೆ ತಿಳಿದಿಲ್ಲ. ನನಗೆ ಇಡೀ ಕರ್ನಾಟಕವೇ ಒಂದು. ಚಾಮರಾಜನಗರ, ಬೀದರ್, ಗುಲ್ಬರ್ಗಾ ಎಲ್ಲವೂ ನನಗೆ ಒಂದೇ. ಒಂದಷ್ಟು ಜನ ತಮ್ಮ ಆಸೆ ಹೇಳಿಕೊಂಡಿದ್ದಾರೆ. ಅವರಲ್ಲಿ ಭೂಮಿ ಬೆಲೆ ಕಡಿಮೆಯಿದೆ ಆದ ಕಾರಣಕ್ಕೆ ಹೇಳಿರಬಹುದು. ಇದರ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ ಹೊರತು ನಾವಲ್ಲ ಎಂದು ಹೇಳಿದರು.

ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಯಾರಾದರೂ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು ಅವರು ಇದರಲ್ಲಿ ಭಾಗಿಯಾಗಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬಿಲ್ ಪಾವತಿ ವಿಚಾರವಾಗಿ ಯಾರಾದರೂ ಕಮಿಷನ್ ಕೇಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. ಬಿಲ್ ಪಾವತಿ ವಿಚಾರವಾಗಿ ಗುತ್ತಿಗೆದಾರರು ಯಾಕೆ ಸಚಿವರನ್ನು ಕೇಳಬೇಕು. ಅವರಿಗೆ ಇಲಾಖೆಯ ಬಜೆಟ್ ಅರಿವಿಲ್ಲವೇ? ಅನುದಾನವೇ ಇಲ್ಲದಿರುವಾಗ ಅವರು ಗುತ್ತಿಗೆ ಹೇಗೆ ತೆಗೆದುಕೊಂಡರು? ಎಂದರು.
ಬಿಜೆಪಿ ಅವಧಿಯಲ್ಲಿ ನನ್ನ ಇಲಾಖೆಯೊಂದರಲ್ಲೇ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆಯನ್ನು ನೀಡಲಾಗಿದೆ. ಈ ಗುತ್ತಿಗೆ ಬಿಲ್ ಪಾವತಿ ಮಾಡಿಸುವಂತೆ ಶಾಸಕರ ಮೂಲಕ ಮನವಿ ಮಾಡಲಾಗುತ್ತಿದೆ" ಎಂದು ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಒಂದು ವರ್ಷ ಮುಂಚಿತವಾಗಿಯೇ ನಾವು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆವು. ಅನುದಾನ ಇಲ್ಲದೆ ಯಾವುದೇ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ನಮ್ಮ ಮಾತು ಕೇಳದೆ ಈಗ ರಾಜಕೀಯ ನಾಯಕರ ಮೂಲಕ ಬಿಲ್ ಪಾವತಿಗೆ ಮನವಿ ಪತ್ರ ನೀಡುತ್ತಿದ್ದಾರೆ ಎಂದು ಹೇಳಿದರು.
ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿಗಳಾಗಲಿ, ನಾನಾಗಲಿ ಇನ್ನು ನೋಡಿಲ್ಲ. ಇದನ್ನು ನೋಡಿದ ನಂತರ ಚರ್ಚೆ ಮಾಡಿ ಯಾವ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ. ಈ ವಿಚಾರದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲು ಆಗುವುದಿಲ್ಲ ಎಂದು ತಿಳಿಸಿದರು. ಬಿಜೆಪಿಯವರು ಪ್ರತಿಭಟನಾ ಬ್ಯಾನರ್ ನಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೋಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೋಟೋ ಹಾಕಿಕೊಳ್ಳಿ, ನಮ್ಮ ಬೆಲೆ ಏರಿಕೆ ಬದಲು ಬಿಜೆಪಿ ಬೆಲೆ ಏರಿಕೆಯನ್ನು ಪ್ರಶ್ನಿಸಿ. ನಿಮ್ಮ ಆಕ್ರೋಶ ನಿಮ್ಮ ನಾಯಕರ ಮೇಲಿರಲಿ, ಇದರಿಂದ ಜನರಿಗೆ, ಪಕ್ಷಕ್ಕೆ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಬೇಕು" ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರ ಹೋರಾಟ ಗ್ಯಾರಂಟಿಗಳ ವಿರುದ್ಧ ನಡೆಯುತ್ತಿದೆ. 1 ಕೋಟಿ 22 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಲಾಭ ಪಡೆಯುತ್ತಿದ್ದಾರೆ. ತೆಲಂಗಾಣದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ ಅಲ್ಲಿ 6 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಮ್ಮಲ್ಲಿ 10 ಕೆಜಿ ನೀಡಲಾಗುತ್ತಿದೆ. ನಾವು ಇಷ್ಟರ ಮಟ್ಟಿಗೆ ಗ್ಯಾರಂಟಿಗಳನ್ನು ನೀಡಿ ಯಶಸ್ವಿಯಾಗುತ್ತೇವೆ ಎಂದು ಅವರು ಎಣಿಸಿರಲಿಲ್ಲ ಅದಕ್ಕೆ ಅವರಿಗೆ ಹೊಟ್ಟೆಯುರಿ ಎಂದರು. ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ಮನವ ಸಂತೈಸಿಕೊಳ್ಳಿ ಕೂಡಲಸಂಗಮದೇವ ಎಂದು ವಚನ ಉಲ್ಲೇಖಿಸಿದ ಡಿಸಿಎಂ ಅವರು ಆ ಪಕ್ಷದ ಎಲ್ಲರೂ ವೀರರು ಶೂರರು ಆಗಲು ಹೊರಟಿದ್ದಾರೆ. ಬಿಜೆಪಿಯವರ ಪಾತ್ರೆಗಳೆಲ್ಲ ತೂತಾಗಿ ಸೋರುತ್ತಿದೆ ಎಂದರು.
ಬಿಲ್ ಪಾವತಿಗೆ ಕೆಲವು ಸಚಿವರು ವಿಳಂಬ ಮಾಡುತ್ತಿದ್ದಾರೆ. ಎನ್ ಓಸಿಗೆ ಕಮಿಷನ್ ಕೇಳುತ್ತಿರುವುದರ ಬಗ್ಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿರುವ ಕುರಿತು ಮಾತನಾಡಿ, ಇದರ ಬಗ್ಗೆ ಲೋಕಾಯುಕ್ತಕ್ಕೆ ಹಾಗೂ ಸರ್ಕಾರಕ್ಕೆ ದೂರು ನೀಡಲಿ. ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತೇವೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ. ನನ್ನ ಇಲಾಖೆಯನ್ನು ಪ್ರಸ್ತಾಪ ಮಾಡಿರಬಹುದು. ಎಲ್ಲಾ ಇಲಾಖೆಗಳ ಬಗ್ಗೆಯೂ ದೂರು ನೀಡಿರಬಹುದು. ಗುತ್ತಿಗೆದಾರರು ದೂರು ನೀಡಲಿ. ನಮಗೆ ಬಿಲ್ ನೀಡಿ ಎಂದು ಕೇಳುತ್ತಾರೆ. ನಾವು ಶೇ. 10-20 ರಷ್ಟು ಬಿಲ್ ಬಿಡುಗಡೆ ಮಾಡಿರುತ್ತೇವೆ ಎಂದರು.












Click it and Unblock the Notifications