ಡಿಕೆ ಶಿವಕುಮಾರ್ ಆಸ್ತಿ ಗಳಿಕೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಏಪ್ರಿಲ್ 17: ಸೋಮವಾರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಡಿಕೆ ಶಿವಕುಮಾರ್ ಅವರ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿ ವಿಚಾರಣೆ ಇಂದು ಅಂತ್ಯಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಸಿಬಿಐ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಹೈಕೋರ್ಟ್ ಪೀಠ ನಡೆಸುತ್ತಿತ್ತು. ಸದ್ಯ ಡಿ.ಕೆ.ಶಿವಕುಮಾರ್ ಹಾಗೂ ಸಿಬಿಐ ವಕೀಲರ ವಾದ ಮಂಡನೆ ಅಂತ್ಯಗೊಂಡಿದ್ದು, ಕೋರ್ಟ್ ಆದೇಶ ಕಾಯ್ದಿರಿಸಲಾಗಿದೆ. ಇದೇ ವೇಳೆ ಪೀಠವು, ಸಿಬಿಐ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ವಿಸ್ತರಿಸಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ವಿರುದ್ಧದ ಸಿಬಿಐ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಅರ್ಜಿದಾರರ ಪರ ಹಾಗೂ ಸಿಬಿಐ ಪರ ವಕೀಲರ ವಾದ ಪ್ರತಿವಾದ ಆಲಿಸುತ್ತಾ ಹಲವು ಬಾರಿ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.
ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಿಕೆ ಶಿವಕುಮಾರ್ ಅವರಿಗೆ ಆರಂಭದಲ್ಲಿ ಕೊಂಚ ನೆಮ್ಮದಿ ಸಿಕ್ಕಿತ್ತು. ಫೆಬ್ರವರಿ 24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಬಳಿಕ ನಡೆದ ವಿಚಾರಣೆಗಳ ಸಮಯದಲ್ಲಿ ಕೋರ್ಟ್, ಮಾರ್ಚ್ 31ಕ್ಕೆ, ಏಪ್ರಿಲ್ 6ಕ್ಕೆ, ಏಪ್ರಿಲ್ 13ಕ್ಕೆ, ಏಪ್ರಿಲ್ 17ರ ವರೆಗೆ ಮಧ್ಯಂತರ ತಡೆ ವಿಸ್ತರಿಸಿತ್ತು. ಇದೀಗ ಮತ್ತೆ ವಿಸ್ತರಣೆಗೊಂಡಿದೆ. ಆದರೆ ವಿಚಾರಣೆ ಅಂತ್ಯಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.












Click it and Unblock the Notifications