Bengaluru second airport: ಈ ಭಾಗಕ್ಕೇ ಬೆಂಗಳೂರು 2ನೇ ಏರ್‌ಪೋರ್ಟ್ ತರಲು ಡಿ.ಕೆ.ಶಿವಕುಮಾರ್ ರಣತಂತ್ರ
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾನಕ್ಕೆ ಭಾರಿ ಅಡ್ಡಿ ಆತಂಕಗಳು ಎದುರಾಗುತ್ತಿವೆ. ರಾಜ್ಯ ಸರ್ಕಾರವು ಮೂರು ಜಾಗಗಳನ್ನು ಗುರುತಿಸಿದ್ದರೂ ಇದಕ್ಕೆ ಒಮ್ಮತ ವ್ಯಕ್ತವಾಗಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಒಗ್ಗೂಡಿ ತುಮಕೂರು ಭಾಗಕ್ಕೆ ಹೊಸ ವಿಮಾನ ನಿಲ್ದಾಣದ ಬೇಡಿಕೆ ಇಟ್ಟಿದ್ದು, ರಾಜ್ಯ ಸರ್ಕಾರ ಗುರುತಿಸಿರುವ ಜಾಗಗಳಿಗೆ ವಿರೋಧದ ಕೂಗು ಎತ್ತಿದ್ದಾರೆ. ಮತ್ತೊಂದೆಡೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಪ್ಲ್ಯಾನ್ ಕೂಡ ಇದೆ ಎನ್ನುವ ಮಾತುಗಳು ಕೇಳಿಬಂದಿವೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವು ಬೆಳವಣಿಗೆಗಳು ನಡೆಯುತ್ತಿವೆ.
ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಇದರ ಹಿಂದೆ ಅವರ ರಾಜಕೀಯ ಲಾಭ ಕೂಡ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಮಾತಿಗೆ ಪುಷ್ಟಿ ನೀಡುವ ಬೆಳವಣಿಗೆ ಎಂದರೆ ರಾಜ್ಯ ಸರ್ಕಾರ ಏರ್‌ಪೋರ್ಟ್‌ಗಾಗಿ ಗುರುತಿಸಿದ್ದ ಮೂರು ಜಾಗಗಳಲ್ಲಿ ಎರಡು ಜಾಗಗಳು ಕನಕಪುರ ರಸ್ತೆಯಲ್ಲೇ ಇದ್ದಿದ್ದು. ಹೌದು ಕುಣಿಗಲ್ ಬಳಿ ಒಂದು ಜಾಗ ಹೊರತುಪಡಿಸಿ, ಇನ್ನೆರಡು ಜಾಗಗಳು ಕೂಡ ಕನಕಪುರ ರಸ್ತೆಯಲ್ಲೇ ಗುರುತಿಸಲಾಗಿದೆ.

ಕನಕಪುರ ತಾಲ್ಲೂಕು ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರವಾಗಿರುವುದರಿಂದ ಈ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಮ್ಮ ಕ್ಷೇತ್ರದ ಸಮೀಪ ನಿರ್ಮಿಸಬೇಕು ಎಂಬ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕನಕಪುರ ರಸ್ತೆಯಲ್ಲೇ ಎರಡು ಜಾಗಗಳನ್ನು ಗುರುತಿಸಲಾಗಿದ್ದು, ಎರಡರಲ್ಲಿ ಯಾವ ಜಾಗ ಫಿಕ್ಸ್ ಆದರೂ ಕನಕಪುರಕ್ಕೇ ಲಾಭ ಎನ್ನುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.
ರಾಮನಗರವೇ ಟಾರ್ಗೆಟ್
ಈ ಹಿಂದೆ ರಾಮನಗರ ಜಿಲ್ಲೆಯ ಬಿಡದಿ ಬಳಿಯೂ ಏರ್‌ಪೋರ್ಟ್‌ಗಾಗಿ ಸ್ಥಳ ವೀಕ್ಷಣೆ ನಡೆದಿತ್ತು. ಆದರೆ ಆ ಜಾಗ ಸೂಕ್ತವಲ್ಲ ಎಂದು ತಜ್ಞರು ವರದಿ ನೀಡಿದ್ದರಿಂದ ಬಿಡದಿ ಔಟ್ ಆಗಿತ್ತು. ಬಳಿಕ ಅಲ್ಲಿ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ನಿರ್ಮಾಣಕ್ಕೆ ಭರದ ಸಿದ್ಧತೆಗಳು ನಡೆದಿವೆ. ಆದರೆ ಹಾರೋಹಳ್ಳಿ ಬಳಿ ಗುರುತಿಸಿರುವ ಜಾಗಗಳು ಕೂಡ ರಾಮನಗರದ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ರಾಮನಗರವನ್ನು ಬೆಂಗಳೂರಿಗೆ ಸೇರಿಸುತ್ತೇನೆ, ಎರಡನೇ ಬೆಂಗಳೂರನ್ನು ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದರು. ಇದರ ಭಾಗವಾಗಿಯೇ ಎರಡನೇ ಏರ್‌ಪೋರ್ಟ್‌ಗಾಗಿ ತಮ್ಮ ತವರು ಜಿಲ್ಲೆಯಲ್ಲೇ ವಿವಿಧ ಸ್ಥಳಗಳನ್ನು ಗುರುತಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಭಾಗದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಇದೀಗ ರಾಮನಗರ ಜಿಲ್ಲೆಗೆ ಸೇರಿರುವ ಮಾಗಡಿ ತಾಲ್ಲೂಕಿನಲ್ಲೂ ಮತ್ತೊಂದು ಜಾಗ ಗುರುತಿಸಲಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಒಪ್ಪುವಂತಹ ಮೂರು ಸ್ಥಳಗಳನ್ನು ಈಗ ರಾಮನಗರಕ್ಕೆ ಸಮೀಪದಲ್ಲೇ ಗುರುತಿಸಲಾಗಿದ್ದು, ಇವುಗಳಲ್ಲೇ ಒಂದು ಜಾಗವಂತೂ ಫಿಕ್ಸ್ ಆಗುವುದು ಪಕ್ಕಾ ಎನ್ನಲಾಗಿದೆ.

ಹೀಗಾಗಿ ಕುಣಿಗಲ್ ಬಿಟ್ಟರೆ ಉಳಿದ ಜಾಗಗಳೆಲ್ಲವೂ ರಾಮನಗರ ಜಿಲ್ಲೆಗೆ ಹತ್ತಿರದಲ್ಲೇ ಇರುವುದರಿಂದ ಡಿಕೆ ಶಿವಕುಮಾರ್ ಪ್ಲ್ಯಾನ್‌ನಂತೆ ರಾಮನಗರದ ಭವಿಷ್ಯಕ್ಕಾಗಿ ಈ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುವುದು ಖಚಿತ ಎಂದು ಗುಸುಗುಸು ಶುರುವಾಗಿದೆ. ಕನಕಪುರ ರಸ್ತೆ ಅಥವಾ ಮಾಗಡಿ ಎಲ್ಲೇ ಏರ್‌ಪೋರ್ಟ್ ನಿರ್ಮಾಣವಾದರೂ ಇದರ ಲಾಭ ಹೆಚ್ಚಾಗಿ ಬೆಂಗಳೂರಿಗಿಂತ ರಾಮನಗರಕ್ಕೇ ಸಿಗಲಿದ್ದು, ಇದರ ಹಿಂದೆ ರಾಜಕೀಯ ಲಾಭ ಕೂಡ ಅಡಗಿದೆ ಎಂಬ ಚರ್ಚೆ ಜೋರಾಗಿದೆ.












Click it and Unblock the Notifications