ಹುಟ್ಟುಹಬ್ಬ ಆಚರಿಸದಂತೆ ಬೆಂಬಲಿಗರಿಗೆ ಮನವಿ ಮಾಡಿದ ಡಿಕೆ ಶಿವಕುಮಾರ್
ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಮೇ 15 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಭಾನುವಾರ ತಮ್ಮ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ತಮ್ಮ ಜನ್ಮದಿನದಂದು ಲೋಕಸಭೆ ಚುನಾವಣೆಗಾಗಿ ಉತ್ತರ ಭಾರತದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕವು 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ ಮತ್ತು ಅವುಗಳಲ್ಲಿ 196 ಅನ್ನು ತೀವ್ರ ಬರ ಪೀಡಿತ ಎಂದು ವರ್ಗೀಕರಿಸಿದೆ.
ಮನವಿ ಮಾಡಿದ ಡಿಕೆಶಿ
ಎಕ್ಸ್‌ನಲ್ಲಿ ವಿಡಿಯೋ ಕ್ಲಿಪ್ ಹಂಚಿಕೊಂಡಿರುವ ಡಿಕೆ ಶಿವಕುಮಾರ್, "ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೇ 15 ರಂದು ನನ್ನ ಜನ್ಮದಿನವನ್ನು ಆಚರಿಸದಂತೆ ನನ್ನ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಈ ವರ್ಷ ನನ್ನ ಜನ್ಮದಿನದಂದು ಯಾವುದೇ ಕಟೌಟ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಹಾಕಬೇಡಿ ಅಥವಾ ಹುಟ್ಟುಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಬೇಡಿ." ಎಂದು ಮನವಿ ಮಾಡಿದ್ದಾರೆ.
ನೀವು ಎಲ್ಲಿದ್ದರೂ ನಿಮ್ಮ ಶುಭಾಶಯಗಳನ್ನು ನನಗೆ ಕಳುಹಿಸಬಹುದು ಮತ್ತು ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ನನಗೆ ಸಾಕು ಎಂದು ಶಿವಕುಮಾರ್ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ತಮ್ಮ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ಇರುವುದಿಲ್ಲ ಮತ್ತು ಚುನಾವಣಾ ಪ್ರಚಾರಕ್ಕಾಗಿ ಉತ್ತರ ಭಾರತದಲ್ಲಿ ಇರುವುದಾಗಿ ತಿಳಿಸಿದ ಅವರು,"ಆದ್ದರಿಂದ, ಪಕ್ಷದ ಮುಖಂಡರು, ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳು ನನ್ನ ಹುಟ್ಟುಹಬ್ಬದಂದು ನನ್ನ ನಿವಾಸ ಅಥವಾ ಕಚೇರಿಗೆ ಭೇಟಿ ನೀಡದಂತೆ ವಿನಂತಿಸುತ್ತೇನೆ. ನೀವು ಎಲ್ಲಿದ್ದರೂ ನನ್ನನ್ನು ಹಾರೈಸಿ." ಎಂದು ಕೇಳಿದ್ದಾರೆ.












Click it and Unblock the Notifications