Diwali 2023: 'ಪರಿಸರ ಸ್ನೇಹಿ ದೀಪಾವಳಿ' ಆಚರಣೆ ಬಿಬಿಎಂಪಿ ಕರೆ: 'ಹಸಿರು ಪಟಾಕಿ' ಗುರುತಿಸುವುದು ಹೇಗೆ?
ಬೆಂಗಳೂರು, ನವೆಂಬರ್ 09: ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯನ್ನು ನಗರದಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲೀನ್ಯ ಮತ್ತು ವಾಯು ಮಾಲೀನ್ಯವನ್ನು ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತದೆ. ಹೀಗೆ ಮಾಡದೇ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ಆಚರಿಸೋಣ ಎಂದು ಬಿಬಿಎಂಪಿ ಕರೆ ನೀಡಿದೆ.
ಹಬ್ಬದ ವೇಳೆ ಪಟಾಕಿ ಸಿಡಿಸುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪ್ರಾಣಿ-ಪಕ್ಷಿಗಳ ಕಲರವಕ್ಕೆ ತೊಂದರೆ ಉಂಟುಮಾಡುತ್ತಿದೆ. ಈ ಬಾರಿ ಹಾಗಾಗದಂತೆ ಎಚ್ಚರ ವಹಿಸೋಣ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿ ಮನವಿ ಮಾಡಿದೆ.

ಹಸಿರು ಪಟಾಕಿ ಹೀಗೆ ಗುರುತಿಸಿ, ಖರೀದಿಸಿ
ಸರ್ವೋಚ್ಛ ನ್ಯಾಯಾಲಯದ ಆದೇಶ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ನಿರ್ದೇಶನದಂತೆ, ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು. ಪಟಾಕಿಗಳನ್ನು ಕೊಳ್ಳುವ ಸಮಯದಲ್ಲಿ ಪಟಾಕಿಗಳ ಪ್ಯಾಕೆಟ್‌ಗಳ ಮೇಲೆ ಹಸಿರು ಚಿನ್ಹೆಯನ್ನು ಖಚಿತಪಡಿಕೊಳ್ಳಿ ಹಾಗೂ ಕ್ಯೂಆರ್ ಕೋಡ್ ಮೂಲಕ ಪಟಾಕಿಯ ಬಗ್ಗೆತಿಳಿದುಕೊಳ್ಳಿ.
ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರವೇ ಪಟಾಕಿಗಳನ್ನು ಹಚ್ಚಲು ಅವಕಾಶವಿರುತ್ತದೆ. ಪಟಾಕಿಯ ಬಳಕೆಯ ಸಮಯದಲ್ಲಿ ಪ್ರಾಣಿಗಳು, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಿದರೆ ಉತ್ತಮ ಎಂದು ಬಿಬಿಎಂಪಿ ಸಲಹೆ ನೀಡಿದೆ.
'ಸ್ವಚ್ಚ ದೀಪಾವಳಿ-ಶುಭ ದೀಪಾವಳಿ': ನೋಂದಾಯಿಸಿಕೊಳ್ಳಿ
ಸಾರ್ವಜನಿರಕು ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರವು. ಸ್ವಚ್ಚ ಭಾರತ್ ಯೋಜನೆ 2.0 ಅಡಿಯಲ್ಲಿ ''ಸ್ವಚ್ಚ ದೀಪಾವಳಿ-ಶುಭ ದೀಪಾವಳಿ'' ಎಂಬ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು 'My Gov Portal' ನಲ್ಲಿ ಅಥವಾ ವೆಬ್ ಲಿಂಕ್ (https://pledge.mygov.in/swachh-diwali-shubh-diwali/) ಅಥವಾ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ದಾಖಲೆಗಳನ್ನು ನೊಂದಾಯಿಸಿಕೊಳ್ಳಬೇಕು.

ಪ್ರಮಾಣ ಮಾಡಿ
'ಸ್ವಚ್ಚ ದೀಪಾವಳಿ-ಶುಭ ದೀಪಾವಳಿ' ಅಭಿಯಾನಕ್ಕೆ ಕೈ ಜೋಡಿಸಲು ಹೆಮ್ಮೆ ಪಡುತ್ತೇನೆ. ಪರಿಸರ ಸ್ನೇಹಿ ಸ್ಥಳಿಯ ಉತ್ಪನ್ನಗಳನ್ನು ಬಳಸಲು ನಾನು ಬದ್ಧನಾಗಿದ್ದೇನೆ. ಏಕ ಬಳಕೆಯ ಪ್ಲಾಸ್ಟಿಕ್ ಬೇಡ ಎಂದು ಹೇಳುತ್ತೇನೆ ಮತ್ತು ಹಸಿರು ದೀಪಾವಳಿಯನ್ನು ಆಚರಿಸುತ್ತೇನೆ' ಎಂದು ಪ್ರಮಾಣ ಮಾಡಿ 'ಸ್ವಚ್ಚ ದೀಪಾವಳಿ-ಶುಭ ದೀಪಾವಳಿ' ಅಭಿಯಾನದಲ್ಲಿ ಪಾಲ್ಗೋಳ್ಳಲು ಬಿಬಿಎಂಪಿ ಕೋರಿದೆ.
ಹಸಿರು ಪಟಾಕಿ ಬಳಸಲು ನಾಗರಿಕರಲ್ಲಿ ಜಾಗೃತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಸಿರು ಪಟಾಕಿಯನ್ನು ಮಾತ್ರ ಬಳಸುವ ಮೂಲಕ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುವ ಸಲುವಾಗಿ ಘನತ್ಯಾಜ್ಯ ವಿಭಾಗದ ಆಟೋ ಟಿಪ್ಪರ್ ಗಳಲ್ಲಿ ಧ್ವನಿವರ್ಧಕಗಳ ಮೂಲಕ ನಾಗರಿಕರಿಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications