ನಟ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣ: ಡೈರೆಕ್ಟರ್ ರಮೇಶ್ ಕಿಟ್ಟಿ ಬಂಧನ
ಬೆಂಗಳೂರು, ಮೇ. 05: ಕೆಲವು ದಿನಗಳಿಂದ ಚಂದನವನದಲ್ಲಿ ಸದ್ದು ಮಾಡುತ್ತಿದ್ದ ಖ್ಯಾತ ನಟ ಕಿಚ್ಚ ಸುದೀಪ್ ಬೆದರಿಕೆ ಪತ್ರ ಪ್ರಕರಣಕ್ಕೆ ಅಂತ್ಯ ದೊರೆತಿದೆ. ಸಿಸಿಬಿ ಪೊಲೀಸರು ಶುಕ್ರವಾರ ಆರೋಪಿ ನಿರ್ದೇಶಕ ರಮೇಶ್ ಕಿಟ್ಟಿ ಎನ್ನುವವರನ್ನು ಬಂಧಿಸಿದ್ದಾರೆ. ಈ ಮೂಲಕ ಕೃತ್ಯವನ್ನು ಆಪ್ತರೆ ಮಾಡಿದ್ದಾರೆ ಎಂಬ ಸುದೀಪ್ ಅವರ ಹೇಳಿಕೆ ನಿಜವಾಗಿದೆ.
ಸ್ಯಾಂಡಲ್‌ವುಡ್ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದರು ಎಂದು ಸಿಸಿಬಿ ಪೊಲೀಸರು ಆರೋಪಿ ಡೈರೆಕ್ಟರ್ ರಮೇಶ್ ಕಿಟ್ಟಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಡೈರೆಕ್ಟರ್ ಒಬ್ಬರ ಕೈವಾಡವಿದೆ ಎನ್ನಲಾಗಿತ್ತು.ಕಿ ಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿದ್ದ ರಮೇಶ್ ಕಿಟ್ಟಿ ಸುದೀಪ್ ಅವರೊಟ್ಟಿಗೆ ಹಣಕಾಸು ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಬೆದರಿಕೆ ಪತ್ರ ಬರೆದಿದ್ದಾರೆ.

ನಟ ಸುದೀಪ್ ಅವರ ಆತ್ಮೀಯರಾಗಿದ್ದ ರಮೇಶ್ ಕಿಟ್ಟಿ ಸುದೀಪ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಚಾರಿಟಬಲ್ ಟ್ರಸ್ಟ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಹಣ ಹೂಡಿಕೆ ಮಾಡಿದ್ದ ರಮೇಶ್ ಅವರಿಗೆ ಸುದೀಪ್ ಹಣ ವಾಪಸ್ಸು ನೀಡಿಲ್ಲ. ಹೀಗಾಗಿ ಭಿನ್ನಾಭಿಪ್ರಾಯ ಉಂಟಾದ ಕಾರಣ ತಾನೇ ಬೆದರಿಕೆ ಪತ್ರ ಬರೆದಿರುವುದಾಗಿ ಸಿಸಿಬಿ ಪೊಲೀಸರ ಬಳಿ ರಮೇಶ್ ಕಿಟ್ಟಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ.
ಪ್ರಕರಣ ಸಂಬಂಧ ನಟ ಸುದೀಪ್ ಮ್ಯಾನೇಜರ್ ಆಗಿರುವ ಮಂಜುನಾಥ್ ಅಲಿಯಾಸ್ ಜಾಕ್ ಮಂಜು ಅವರು ಮಾರ್ಚ್ 29 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಬೆದರಿಕೆ ಪತ್ರದ ಕುರಿತು ದೂರು ನೀಡಿದ್ದರು. ಅಪರಿಚಿತ ಆರೋಪಿಗಳು ಮಾರ್ಚ್ 10 ರಂದು ಸುದೀಪ್ ಅವರ ಜೆಪಿ ನಗರದ ನಿವಾಸಕ್ಕೆ ಎರಡು ಬೆದರಿಕೆ ಪತ್ರಗಳನ್ನು ಕಳುಹಿಸಿದ್ದರು. ಸುದೀಪ್ ಅವರು ಪತ್ರವನ್ನು ಕಳುಹಿಸಿದ ವ್ಯಕ್ತಿಯ ಬಗ್ಗೆ ನನಗೆ ತಿಳಿದಿದೆ ಮತ್ತು ಅದು ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಈ ಕೆಲಸ ಮಾಡಿದ್ದಾರೆ ಎಂದು ಈ ಹಿಂದೆ ಹೇಳಿದ್ದರು.

ಅನಾಮಧೇಯ ಬೆದರಿಕೆ ಪತ್ರಗಳು ದೊಮ್ಮಲೂರು ಭಾಗದಿಂದ ರವಾನೆಯಾಗಿರುವುದನ್ನು ಪತ್ತೆ ಹಚ್ಚಿದ ಆಯುಕ್ತರು ಪುಟ್ಟೇನಹಳ್ಳಿ ಠಾಣೆಯಿಂದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಕೇಂದ್ರ ಅಪರಾಧ ವಿಭಾಗದ (CCB ) ಪೊಲೀಸರು ಸೈಬರ್ ತಜ್ಞರ ನೆರವು ಕೋರಿದ್ದರು. ತನಿಖೆಗಾಗಿ ಸೈಬರ್ ಭದ್ರತಾ ತಜ್ಞರನ್ನು ನಿಯೋಜಿಸಲಾಗಿತ್ತು. ಸದ್ಯ ಪೊಲಿಸರು ಈ ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಮತ್ತಷ್ಟು ಜನರ ಕೈವಾಡವಿರುವ ಶಂಕೆಯಲ್ಲಿ ತನಿಖೆಯನ್ನು ಮುಂದುವರೆಸಲಾಗುತ್ತಿದೆ.












Click it and Unblock the Notifications