Caste Survey: ಸಮೀಕ್ಷೆಯಿಂದ ಮತಾಂತರ! ಪ್ರಹ್ಲಾದ್ ಜೋಶಿಗೆ ಆರೋಗ್ಯ ಸಚಿವರ ತಿರುಗೇಟು
ಬೆಂಗಳೂರು, ಅಕ್ಟೋಬರ್ 06: ಕರ್ನಾಟಕ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಿದೆ. ಈ ಸಮೀಕ್ಷೆ ಹಿಂದೂಗಳ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಆರೋಪಿಸಿದ್ದರು. ಈ ವಿಚಾರವಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ ಬೆನ್ನಲ್ಲೆ ದಿನೇಶ್ ಗುಂಡೂರಾವ್ ಅವರು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆಯಿಂದ ಮತಾಂತರಕ್ಕೆ ಪ್ರೋತ್ಸಾಹ ಸಿಗಲಿದೆ ಎಂದಿದ್ದು, ಅದ್ಹೇಗೆ ಮತಾಂತರಕ್ಕೆ ಪ್ರೋತ್ಸಾಹ ನೀಡಲಿದೆ? ಎಂದು ಜೋಶಿಯವರಂತಹ ಬೃಹಸ್ಪತಿಗಳೇ ಸ್ಪಷ್ಟಪಡಿಸಬೇಕು. ಈ ರೀತಿಯ ಅತಾರ್ಕಿಕ ಚಿಂತನೆಗಳು ಬಿಜೆಪಿಯವರ ತಲೆಯಲ್ಲಿ ಹೇಗೆ ಹುಟ್ಟಿಕೊಳ್ಳುತ್ತವೋ ಆ ದೇವರೆ ಬಲ್ಲ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿಯಲ್ಲ. ಬದಲಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ. ಈ ಸಮೀಕ್ಷೆಯಿಂದ ರಾಜ್ಯದ ಜನರ ವಸ್ತುಸ್ಥಿತಿ ತಿಳಿಯಲಿದೆ. ಇದಕ್ಯಾಕೆ ಬಿಕೆಪಿಯವರ ವಿರೋಧ.? ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆಯನ್ನು ವಿರೋಧಿಸುವ ಬಿಜೆಪಿಯವರು ಮುಂದಿನ ವರ್ಷದಿಂದ ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿಯನ್ನು ವಿರೋಧಿಸಲಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿರುವ ಜೋಶಿಯವರು ಪ್ರಾರಂಭದಿಂದಲೂ ಸಮೀಕ್ಷೆಯ ಬಗ್ಗೆ ಜನರಲ್ಲಿ ಪೂರ್ವಗ್ರಹ ಬಿತ್ತುತ್ತಿದ್ದಾರೆ. ಜೋಶಿಯವರು ರಾಜ್ಯದ ಸಮೀಕ್ಷೆಯನ್ನು ವಿರೋಧಿಸುವಂತೆ ಕೇಂದ್ರದ ಜಾತಿ ಗಣತಿಯನ್ನೂ ವಿರೋಧಿಸಿ ತಮ್ಮದು ಇಬ್ಬಂದಿ ನಿಲುವಲ್ಲ ಎಂದು ಪ್ರದರ್ಶಿಸಲಿ. ಈ ತಾಕತ್ತು ಜೋಶಿಯವರಿಗಿದೆಯೆ.? ಎಂದು ಅವರು ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ರಿಯಾಕ್ಷನ್
ಇತ್ತೀಚೆಗೆ ಇದೇ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ನಿಮ್ಮ ಪಕ್ಷದ ನಾಯಕರು ಕುಟುಂಬ ಸಮೇತರಾಗಿ ಮತಾಂತರವಾಗಿದ್ದಾರೆ ಎಂದು ನಿಮ್ಮದೇ ಪಕ್ಷದವರು ತಿಳಿಸಿದ್ದರು. ಇವರ ಮತಾಂತರಕ್ಕೆ ಪ್ರೇರಣೆ ಯಾವುದು?. ನಿಮ್ಮ ಪಕ್ಷದವರಿಗಾಗಿ ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳುವಿರಾ?. ಸಮೀಕ್ಷೆಯಿಂದ ಮತಾಂತರವಾಗುತ್ತಾರೆ ಎಂದಾದರೆ, ನಿಮ್ಮ ಪ್ರಕಾರ, ಹಿಂದೂ ಧರ್ಮ ಅಷ್ಟು ದುರ್ಬಲವೇ ಎಂದು ಖರ್ಗೆ ಪ್ರಶ್ನಿಸಿದರು. ಜನರಿಗೆ ಬೇಕಿರುವುದು ಮ್ಯಾಜಿಕ್ ಮಾತುಗಳಲ್ಲ, ಲಾಜಿಕ್ ಮಾತುಗಳು ಎಂದು ಕೇಂದ್ರ ಸಚಿವರ ವಿರುದ್ಧ ಕಿಡಿ ಕಾರಿದರು.












Click it and Unblock the Notifications