Khata Certificate: ಎ-ಖಾತಾ ಇದ್ದರೂ ಈ ಅಂಶಗಳು ನೆನಪಿರಲಿ, ಖಾತಾ ಎಂದರೇನು, ಯಾಕೆ ಮುಖ್ಯ ?
Khata Certificate: ಆಸ್ತಿಗಳ ವಿಚಾರದಲ್ಲಿ ರಾಜ್ಯ ಸರ್ಕಾರವು ಹಲವು ಹೊಸ ನಿಯಮಗಳನ್ನು ಜಾರಿ ಮಾಡುತ್ತಿದೆ. ಅದರಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು ಸಹ ಸೇರಿದೆ. ಇದೇ ಸಂದರ್ಭದಲ್ಲಿ ಎ ಖಾತಾ ಹಾಗೂ ಬಿ ಖಾತಾದ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಬಿ ಖಾತಾಗಿಂತ ಎ ಖಾತಾ ಅತ್ಯಂತ ಸುರಕ್ಷಿತ ಹಾಗೂ ಕಾನೂನು ಬದ್ಧವಾದ ಆಸ್ತಿ ಎಂದು ಹೇಳಲಾಗುತ್ತದೆ. ಆದರೆ, ಎ ಖಾತಾ ಹಾಗೂ ಖಾತಾ ಮಾಡಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಗಾದರೆ ಖಾತಾ ಎಂದರೆ ಏನು, ಖಾತಾ ಪ್ರಮಾಣ ಪತ್ರವನ್ನು ನೋಡುವುದು ಹೇಗೆ ಮತ್ತು ಎ ಖಾತಾ ಮತ್ತು ಬಿ ಖಾತಾ ನಡುವಿನ ವ್ಯತ್ಯಾಸಗಳೇನು ಎನ್ನುವ ವಿವರ ಇಲ್ಲಿದೆ.
ರಾಜ್ಯದ ಎಲ್ಲಾ ಆಸ್ತಿಗಳಿಗೂ ರಾಜ್ಯ ಸರ್ಕಾರವು ಇ ಖಾತಾ (ಆಸ್ತಿ ದಾಖಲೆಗಳ ಡಿಜಿಟಲ್ ರೂಪ) ಮಾಡಿದೆ. ಇದೇ ಸಂದರ್ಭದಲ್ಲಿ ಅನಧಿಕೃತ ರೆವಿನ್ಯೂ ಹಾಗೂ ನಿವೇಶನಗಳಿಗೆ ಬಿ ಖಾತಾ ನೀಡುವುದಕ್ಕೆ ಮುಂದಾಗಿದೆ. ಇದು ಕೆಲವರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಏಕಕಾಲಕ್ಕೆ ಈ ಬೆಳವಣಿಗೆ ನಡೆಯುತ್ತಿರುವುದು ಕೆಲವು ಆಸ್ತಿದಾರರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಹೀಗಾಗಿ, ಖಾತಾ ಎಂದರೇನು ಎ ಖಾತಾ ಮತ್ತು ಬಿ ಖಾತಾಗಳ ನಡುವಿನ ಪ್ರಮುಖ ವ್ಯತ್ಯಾಸವೇನು ಮತ್ತು ಖಾತಾ ಮಾಡಿಸುವಾಗ ಗಮನಿಸಬೇಕಾದ ಅಂಶಗಳ ವಿವರ ನೋಡೋಣ..

ಮೊದಲಿಗೆ ಖಾತಾ ಪ್ರಮಾಣ ಪತ್ರ ಎಂದರೇನು: ಖಾತಾ ಪ್ರಮಾಣಪತ್ರ ಎನ್ನುವುದು ಆಸ್ತಿಯ ಮಾಲೀಕತ್ವದ ವಿವರಗಳನ್ನು ದಾಖಲಿಸುವ ಮತ್ತು ಮೌಲ್ಯೀಕರಣ ಮಾಡುವ ಕಾನೂನು ಬದ್ಧ ದಾಖಲೆಯಾಗಿದೆ. ಈ ರೀತಿ ಆಸ್ತಿದಾರರಿಗೆ ನೀಡುವ ಪ್ರಮಾಣಪತ್ರದಲ್ಲಿ ಆಸ್ತಿಯ ವಿಸ್ತೀರ್ಣ, ಯಾವ ಪ್ರದೇಶದಲ್ಲಿ ಆಸ್ತಿ ಇದೆ, ಸ್ಥಳ ಹಾಗೂ ಆಸ್ತಿ ಪ್ರಕಾರ ಅಂದರೆ ಅದು ವಸತಿ ಅಥವಾ ವಾಣಿಜ್ಯ ವ್ಯಾಪ್ತಿಗೆ ಸೇರಿದೆಯೋ ಎನ್ನುವುದು ಸೇರಿದಂತೆ ಹಲವು ಪ್ರಮುಖ ಅಂಶಗಳು ಇದರಲ್ಲಿ ಇರುತ್ತವೆ.
ಎ ಖಾತಾ ಈ ಎಚ್ಚರಿಕೆ ಇರಲಿ: ಎ ಖಾತಾ ಹೊಂದಿದ್ದರೆ, ಆ ಆಸ್ತಿಯು ಬೆಂಗಳೂರಿನಲ್ಲಿ ಎಲ್ಲಾ ಸರ್ಕಾರಿ ನಿಯಮಗಳು ಮತ್ತು ಆಸ್ತಿ-ಸಂಬಂಧಿತ ನಿರ್ಮಾಣ ನಿಯಮಗಳನ್ನು ಪಾಲಿಸಿದೆ ಎಂದರ್ಥ. ಎ-ಖಾತಾ ದಾಖಲೆಯನ್ನು ಹೊಂದಿರುವುದು ಆಸ್ತಿ ಮಾಲೀಕರಿಗೆ ಕಟ್ಟಡ ಯೋಜನೆ, ವ್ಯಾಪಾರ ಅನುಮೋದನೆಗಳು, ಕಟ್ಟಡ ಪರವಾನಗಿಗಳು ಮತ್ತು ಬ್ಯಾಂಕ್ ಸಾಲ ಸೇರಿದಂತೆ ಹಲವು ಪ್ರಮುಖ ಸೌಲಭ್ಯಗಳು ಸಿಗುತ್ತವೆ. ಆದರೆ ಖಾತಾ ಮಾಡಿಸುವಾಗ ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಈ ರೀತಿ ತಪ್ಪಾದರೆ ಎ ಖಾತಾ ಇದ್ದರೂ ಮುಂದಿನ ದಿನಗಳಲ್ಲಿ ಎ ಖಾತಾ ರದ್ದಾಗಬಹುದು.
ಈಗಾಗಲೇ ನಿಯಮ ಉಲ್ಲಂಘನೆ ಮಾಡಿ ಎ ಖಾತಾ ಪಡೆದಿರುವ ಬಗ್ಗೆ ಆಂತರಿಕ ತನಿಖೆ ನಡೆಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆ.
ಖಾತಾ ಎನ್ನುವುದು ಯಾಕೆ ಮುಖ್ಯ: ಖಾತಾ ಎನ್ನುವುದು ಆಸ್ತಿಯ ವಿಚಾರದಲ್ಲಿ ಆತ್ಮದಂತೆ. ಹೌದು ಖಾತಾ ಆಸ್ತಿಯ ಅತ್ಯಂತ ಪ್ರಮುಖ ದಾಖಲೆಯಾಗಿರುತ್ತದೆ. ಆಸ್ತಿಯ ಮಾಲೀಕರು ಯಾರು ಎನ್ನುವುದನ್ನು ಇದು ತೋರಿಸುತ್ತದೆ. ಮುಂದುವರಿದು ಆಸ್ತಿ ಖರೀದಿ ಹಾಗೂ ಮಾರಾಟದ ಸಂದರ್ಭದಲ್ಲಿ ಖಾತಾ ಅತ್ಯವಶ್ಯಕ ಹಾಗೂ ಪ್ರಮುಖ ದಾಖಲೆಯಾಗಿದೆ.












Click it and Unblock the Notifications