ಕೃಷಿಗೆ ಪೂರಕವಾದ 'ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ' ಉದ್ಘಾಟನೆ ನಾಳೆ
ಬೆಂಗಳೂರು, ಜೂನ್ 21: ಕೃಷಿ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಮೂಲಕ ಕ್ರಾಂತಿಕಾರ ಬದಲಾವಣೆಗೆ ಮುನ್ನುಡಿ ಬರೆಯಲಿರುವ 'ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ'ಯನ್ನು ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಉದ್ಘಾಟಿಸಲಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಧನ್ವಂತರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಶೈಕ್ಷಣಿಕ ನಿರ್ದೇಶಕ ಡಾ. ಗಣೇಶ್ ಪಿ.ಬಿ ಅವರು, ಅಕಾಡೆಮಿ ನಿರ್ಮಾಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದನೆ ನೀಡಿದೆ. ಅಣ್ಣಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ ಎಂದರು.

ಈ 'ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ' ನಾಳೆ ಶನಿವಾರ ಜೂನ್ 22ರಂದು ಉದ್ಘಾಟನೆಗೊಳ್ಳಲಿದೆ. ನಗರದ ಚಿಕ್ಕಬಾಣಾವರದಲ್ಲಿ ಇದೇ ಮೊದಲ ಬಾರಿಗೆ 'ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ' ತಲೆ ಎತ್ತಿದೆ. ಇದಕ್ಕೆ ಕೃಷಿ ಸಚಿವರು ಚಾಲನೆ ನೀಡುವ ಮೂಲಕ ಅದರ ಮಹತ್ವ ಸಾರಲಿದ್ದಾರೆ. ಎಂದರು.
ಅಕಾಡೆಮಿಯಲ್ಲಿ ಯಾವೆಲ್ಲ ವಿಷಯ ಇರಲಿದೆ?
ಅಕಾಡೆಮಿಯಲ್ಲಿ ದೇಶದ ಪ್ರಮುಖ ನರ್ಸಿಂಗ್, ಪ್ಯಾರಾ ಮೆಡಿಕಲ್, ಮ್ಯಾನೇಜ್ ಮೆಂಟ್ ಸ್ಟಡೀಸ್ ಒಳಗೊಂಡಂತೆ ಸಮಗ್ರ ಶೈಕ್ಷಣಿಕ ವಿಷಯಗಳನ್ನು ಒಳಗೊಂಡಿರಲಿದೆ ಎಂದು ಅವರು ತಿಳಿಸಿದರು.
ನಾಳೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮಿಳುನಾಡಿನ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪಾಧ್ಯಕ್ಷ ಡಾ. ಮೈಲಸ್ವಾಮಿ ಅಣ್ಣಾ ದೊರೈ, ಅಣ್ಣಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ವೆಲ್ರಾಜ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವಿ. ಸುರೇಶ, ಭಾರತೀಯ ವಿಜ್ಞಾನ ಮಂದಿರದ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎನ್.ಎಸ್. ಓಂಕಾರ್, ಕೇಂದ್ರದ ವಿಮಾನಯಾನ ಮಹಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಾನೆ ಮತ್ತಿತರೆ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಯಾವೆಲ್ಲ ತರಗತಿಗಳು ಇರಲಿವೆ?
ಧನ್ವಂತರಿ ಸಂಸ್ಥೆ ಇದೇ ಮೊದಲ ಬಾರಿಗೆ ಮಾನವ ರಹಿತ ವೈಮಾನಿಕ ವಾಹನಗಳು, ಡ್ರೋನ್ ಗಳ ಹೊಸ ಪ್ರಯಾಣವನ್ನು ಪ್ರಾರಂಭಿಸಿದೆ. ಸಿ.ಎ.ಎಸ್.ಆರ್ ಹಾಗೂ ಎಂಐಟಿ, ಅಣ್ಣಾ ವಿಶ್ವವಿದ್ಯಾಲಯಗಳು ಹಾರಾಟ (ಪ್ಲೈಯಿಂಗ್) ತರಗತಿಗಳನ್ನು ನಡೆಸಲು ಅನುಮತಿ ಪಡೆದುಕೊಂಡಿವೆ.
ಚಿಕ್ಕಬಾಣಾವರದಲ್ಲಿ ಕ್ಯಾಂಪಸ್ ಸಿಮ್ಯುಲೇಟರ್ ಗಳನ್ನು ಆಯೋಜಿಸಲಾಗುತ್ತದೆ ಮತ್ತು ತರಗತಿಗಳನ್ನು ನಡೆಸಲಾಗುತ್ತದೆ. ಯುಎವಿ ಸಂಗ್ರಹಣೆ, ಬ್ಯಾಟರಿ ಚಾರ್ಜಿಂಗ್, ಯುಎವಿ ನಿರ್ವಹಣೆ ಜೊತೆಗೆ ಸಮೀಪದ ಆಲೂರು ವಲಯದಲ್ಲಿ ಪ್ಲೈಯಿಂಗ್ ಫೀಲ್ಡ್ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಡಾ. ಗಣೇಶ್ ಪಿ.ಬಿ ಜೊತೆಗೆ ವಿಂಗ್ ಕಮಾಂಡರ್ ಕೆ.ಆರ್. ಶ್ರೀಕಾಂತ್, ಫ್ಲೈಟ್ ಲೆಪ್ಟಿನೆಂಟ್ ಎ.ಟಿ. ಕಿಶೋರ್ ಮತ್ತಿತರರು ಮುಖಸ್ಥರು ಮಾತನಾಡಿದರು.












Click it and Unblock the Notifications