Bengaluru Second Airport: ಹೀಗೆ ಮಾಡಿದ್ರೆ 2040ನೇ ಇಸವಿ ಬಂದರೂ 2ನೇ ವಿಮಾನ ನಿಲ್ದಾಣ ಆಗಲ್ಲ: ಎಂ ಬಿ ಪಾಟೀಲ್
ಬೆಂಗಳೂರು, ಮೇ 08: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಇನ್ನೂ ಅಂತಿಮವಾಗಿಲ್ಲ. ಕನಕಪುರ ರಸ್ತೆಯಲ್ಲಿ ಎರಡು ಪ್ರದೇಶ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಪ್ರದೇಶವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಎರಡನೇ ಏರ್ಪೋರ್ಟ್ ಸಂಬಂಧ ಮೂರೂ ಸ್ಥಳಗಳ ಪರಿಶೀಲನೆ ನಡೆಸಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ಇನ್ನು ಒಂದು ತಿಂಗಳಲ್ಲಿ ತನ್ನ ಅಭಿಪ್ರಾಯ ತಿಳಿಸುವ ಸಾಧ್ಯತೆ ಇದೆ.
ಈ ಹಿಂದೆ ಎಡರನೇ ವಿಮಾನ ನಿಲ್ದಾಣದ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಮಾಹಿತಿ ನೀಡಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ಸ್ಥಳ ಪರಿಶೀಲನೆಯನ್ನ ಈಗಾಗಲೇ ನಡೆಸಿದೆ. ಬಳಿಕ ಇದನ್ನು ವಿಸ್ತೃತ ಅಧ್ಯಯನಕ್ಕೆ ವಿಮಾನ ನಿಲ್ದಾಣಗಳ ಅಭಿವೃದ್ಧಿಪಡಿಸುವಂತಹ ಪರಿಣತ ಕಂಪನಿಗಳ ಮುಂದೆ ಕೊಂಡೊಯ್ಯಲಾಗುವುದು. ನಂತರ ಸರ್ಕಾರವು ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸಲಿದೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣವನ್ನು ಎಲ್ಲಿ ಮಾಡಿದರೆ ಸೂಕ್ತವೆನ್ನುವುದು ಪ್ರಯಾಣಿಕರ ದಟ್ಟಣೆ, ಕಾರ್ಗೋ ದಟ್ಟಣೆ ಮತ್ತು ಕೈಗಾರಿಕಾ ಅಗತ್ಯ ಮುಂತಾದ ಅಂಶಗಳನ್ನು ಅವಲಂಬಿಸಿದೆ. ಈಗ ದೇವನಹಳ್ಳಿ ಬಳಿ ವಿಮಾನ ನಿಲ್ದಾಣವಿದೆ. 2033ರವರೆಗೂ ಇಲ್ಲಿಂದ 150 ಕಿ.ಮೀ. ಅಂತರದಲ್ಲಿ ಇನ್ನೊಂದು ಏರ್ಪೋರ್ಟ್ ಮಾಡಬಾರದು ಎನ್ನುವ ಷರತ್ತಿದೆ. ನಾವು ಈಗಿನಿಂದಲೇ ಪ್ರಾರಂಭಿಸಿದರೆ, 2030ರ ವೇಳೆಗೆ ಎರಡನೇ ಏರ್ಪೋರ್ಟ್ ಅಭಿವೃದ್ಧಿ ಪ್ರಾರಂಭಿಸಬಹುದು. ಇಲ್ಲದೆ ಹೋದರೆ 2040ನೇ ಇಸವಿ ಬಂದರೂ ವಿಮಾನ ನಿಲ್ದಾಣ ಆಗುವುದಿಲ್ಲ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ತಿಳಿಸಿದರು.
ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸ್ಪಂದನಶೀಲತೆ ಮುಖ್ಯ
ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಕೆಐಎಡಿಬಿ ಅಧಿಕಾರಿಗಳು ಕರ್ನಾಟಕವನ್ನು ಕೈಗಾರಿಕಾ ಪ್ರಪಂಚದಲ್ಲಿ ಮತ್ತಷ್ಟು ಸುಭದ್ರವಾಗಿ ಮತ್ತು ಪುರೋಗಾಮಿಯಾಗಿ ಬೆಳೆಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸಲಹೆ ನೀಡಿದ್ದಾರೆ. ನಾವೀಗ ಏಕಕಾಲದಲ್ಲಿ ಜಾಗತೀಕರಣ ಮತ್ತು ನೆರೆಹೊರೆಯ ರಾಜ್ಯಗಳ ಸ್ಪರ್ಧೆ ಎರಡನ್ನೂ ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಹೂಡಿಕೆದಾರರು ನಮ್ಮ ರಾಜ್ಯವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಈ ಹೊಣೆಗಾರಿಕೆಯನ್ನು ನಿರ್ವಹಿಸುವ ಮೂಲಕ ರಾಜ್ಯದ ಉದ್ಯಮ ವಲಯದಲ್ಲಿ ಸುಗಮ ವಹಿವಾಟು ಸಂಸ್ಕೃತಿಯನ್ನು ರೂಪಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ರಾಜ್ಯದ ಅರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಹೀಗಾಗಿ ಹೂಡಿಕೆದಾರರಿಗೆ ಬೇರೆಬೇರೆ ಇಲಾಖೆಗಳಿಂದ ತ್ವರಿತವಾಗಿ ಅನುಮೋದನೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಹೂಡಿಕೆದಾರರು ವಿಳಂಬ ಗತಿಯನ್ನು ಸಹಿಸುವುದಿಲ್ಲ. ಸರಕಾರದ ನೀತಿಗಳು ಕೈಗಾರಿಕಾಸ್ನೇಹಿಯಾಗಿಯೇ ಇವೆ. ಅಧಿಕಾರಿಗಳು ಇವುಗಳ ಪ್ರಯೋಜನವನ್ನು ಉದ್ದಿಮೆದಾರರಿಗೆ ತಲುಪಿಸಬೇಕು. ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಈ ಮೂಲಕ ಕಾಣಿಕೆ ಕೊಡಬೇಕು ಎಂದು ಪಾಟೀಲ ನುಡಿದಿದ್ದಾರೆ. ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಉಪಸ್ಥಿತರಿದ್ದರು.












Click it and Unblock the Notifications