5 ಕೋಟಿ ವೆಚ್ಚದ ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ
ಬೆಂಗಳೂರು, ಜೂ. 20 : ಅಧಿಕ ಆಷಾಡದ ಏಕಾದಶಿ ದಿನ ಜೆಡಿಎಸ್ ನೂತನ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರು ಬಿಬಿಎಂಪಿ ಚುನಾವಣೆಗೆ ಸಿದ್ಧರಾಗುವಂತೆ ಕರೆ ನೀಡಿದ್ದಾರೆ.
ಶುಕ್ರವಾರ ಶೇಷಾದ್ರಿಪುರಂನ ಕೃಷ್ಣ ಫ್ಲೋರ್ ಮಿಲ್ ಬಳಿ ಜೆಡಿಎಸ್ ಕಚೇರಿಗೆ ಮಂಜೂರಾಗಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ದೇವೇಗೌಡರು ಭೂಮಿ ಪೂಜೆ ನೆರವೇರಿಸಿದರು. 5 ಕೋಟಿ ವೆಚ್ಚದಲ್ಲಿ ಪಕ್ಷದ ಕಚೇರಿ ನಿರ್ಮಾಣವಾಗಲಿದೆ ಎಂದು ದೇವೇಗೌಡರು ತಿಳಿಸಿದರು. [ಜೆಡಿಎಸ್ ತಾತ್ಕಾಲಿಕ ಕಚೇರಿ ಉದ್ಘಾಟನೆ]

ಪಕ್ಷದ ಕಚೇರಿ ನಿರ್ಮಾಣಕ್ಕಾಗಿ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಧನ ಸಹಾಯ ಮಾಡಿದ್ದಾರೆ. ಇದುವರೆಗೆ 47 ಲಕ್ಷ ರೂ. ಸಂಗ್ರಹವಾಗಿದೆ. ಇ.ಕೃಷ್ಣಪ್ಪ 10 ಲಕ್ಷ, ಶರವಣ 10 ಲಕ್ಷ, ಚೌಡರೆಡ್ಡಿ 10 ಲಕ್ಷ ರೂ. ಸೇರಿ ಇವತ್ತು 50 ಲಕ್ಷ ರೂ. ದೇಣಿ ನೀಡಿದ್ದಾರೆ ಎಂದು ದೇವೇಗೌಡರು ಹೇಳಿದರು. [ರೇಸ್ ಕೋರ್ಸ್ ರಸ್ತೆ ಕಚೇರಿ ಕಳೆದುಕೊಂಡ ಜೆಡಿಎಸ್]
ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ, ಜೆಡಿಎಸ್ ಪಕ್ಷದ ಕಟ್ಟಡ ಸಹ ಕಾರ್ಯಕರ್ತರ ಆಸ್ತಿ. ಅವರೇ ದೇಣಿಗೆ ನೀಡಿ ಕಟ್ಟಿಸುತ್ತಿದ್ದಾರೆ. ಪಕ್ಷದ ಶಾಸಕರು, ಸಂಸದರು ದೇಣಿಗೆ ನೀಡುವ ಭರವಸೆ ನೀಡಿದ್ದಾರೆ. ಕಬ್ಬಿಣ, ಸಿಮೆಂಟ್ ಡೀಲರ್‌ಗಳು ಸಾಮಗ್ರಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು. [ಕಾಂಗ್ರೆಸ್ ಗೆ ಕಚೇರಿ ಬಿಗ ಕೊಟ್ಟ ಜೆಡಿಎಸ್]

ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಏನೆಂದು ಜನರಿಗೆ ತಿಳಿಯಲಿದೆ. ಜೆಡಿಎಸ್ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯುತ್ತಿದೆ. ಜೆಡಿಎಸ್ ನೆಲಕಚ್ಚಿದೆ ಎಂದು ಟೀಕಿಸಿದ್ದ ಬಿಜೆಪಿ ಸ್ಥಿತಿ ರಾಜ್ಯದಲ್ಲಿ ಹೇಗಿದೆ? ಎಂಬುದು ಗೊತ್ತು ಎಂದು ಗುಡುಗಿದರು.
ಕಾಂಗ್ರೆಸ್‌ಗೆ ಕಚೇರಿ : ಮೊದಲು ರೇಸ್ ಕೋರ್ಸ್ ರಸ್ತೆಯಲ್ಲಿ ಜೆಡಿಎಸ್ ಕಚೇರಿ ಇತ್ತು. ಸುಪ್ರೀಂಕೋರ್ಟ್ ಆ ಕಚೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಆದೇಶ ನೀಡಿತ್ತು, ಕಚೇರಿಯನ್ನು ಖಾಲಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಸೂಚನೆ ನೀಡಿತ್ತು. ಕೋರ್ಟ್ ಆದೇಶದಂತೆ ಕಚೇರಿ ಬಿಟ್ಟುಕೊಟ್ಟ ಜೆಡಿಎಸ್ ಹೊಸ ಕಚೇರಿ ನಿರ್ಮಾಣ ಕಾರ್ಯ ಆರಂಭಿಸಿದೆ.












Click it and Unblock the Notifications