ದೇವನಹಳ್ಳಿಯಲ್ಲಿ 1,777 ಎಕ್ರೆ ಭೂಸ್ವಾಧೀನಕ್ಕೆ ರೈತರ ವಿರೋಧ: ಅ.25ರ ನಂತರ ಎಂಬಿ ಪಾಟೀಲ್ ಸಭೆ
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (KIADB) ಭೂಸ್ವಾಧಿನಕ್ಕೆ ರೈತರು ಸೇರಿದಂತೆ ಸ್ಥಳೀಯರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೊಂದಿಗೆ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸಭೆ ನಡೆಸಲಿದ್ದಾರೆ.
ಈ ಹೋಬಳಿ ವ್ಯಾಪ್ತಿಯಲ್ಲಿ IKIADB ಒಟ್ಟು 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ರೈತರಿಂದ ಪ್ರತಿರೋಧ ವ್ಯಕ್ತವಾಗಿದೆ. ಈ ಸಂಬಂಧವಾಗಿ ಅನುಕೂಲಕರ ತೀರ್ಮಾನಕ್ಕೆ ಬರಲು ಅ.25ರ ನಂತರ ಮತ್ತೊಂದು ಸಭೆ ಕರೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಬುಧವಾರ ಬೆಂಗಳೂರಿನ ಖನಿಜ ಭವನದ್ಲಲಿ ಸಚಿವರು ಹಾಗೂ ರೈತರ ಮುಖಂಡರ ಮಧ್ಯೆ ಸುದೀರ್ಘ ಚರ್ಚೆ ನಡೆಯಿತು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು ಪಾಲ್ಗೊಂಡಿದ್ದರು. ಅವರು ಸಹ ರೈತರ ಮನವೊಲಿಕೆ ಪ್ರಯತ್ನಿಸಿದರು. ಈ ಸಭೆಯಲ್ಲಿ ಯಾವುದು ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ.
KIADB ವಿರುದ್ಧ ಒಂದೂವರೆ ವರ್ಷದಿಂದ ಹೋರಾಟ
ಸಭೆಯಲ್ಲಿದ್ದ ರೈತ ಮುಖಂಡರಾದ ಬೈಯಾರೆಡ್ಡಿ, ಚುಕ್ಕಿ ನಂಜುಂಡಸ್ವಾಮಿ ಮತ್ತಿತರರು ಭೂಸ್ವಾಧೀನವನ್ನು ವಿರೋಧಿಸಿ ಸುಮಾರು ಒಂದೂವರೆ ವರ್ಷದಿಂದಲೂ ಹೋರಾಟ ನಡೆಯುತ್ತಿದೆ. ಆದ್ದರಿಂದ, ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದು ಮಾಡಬೇಕು. ಇದರಲ್ಲಿ ಹದಿಮೂರು ಹಳ್ಳಿಗಳ ನೂರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆ ಅಡಗಿದೆ ಎಂದು ತಿಳಿಸಿದರು.
ಅಹವಾಲುಗಳನ್ನು ಆಲಿಸಿದ ಸಚಿವ ಎಂಬಿ ಪಾಟೀಲ್ ಅವರು ಇನ್ನೇ 3-4 ದಿನಗಳಲ್ಲಿ ನೀವೆಲ್ಲರೂ ಮತ್ತೊಮ್ಮೆ ಸಭೆ ಸೇರಿ, ಒಮ್ಮತಕ್ಕೆ ಬನ್ನಿ. ಇದೇ 25ರ ನಂತರ ನಾವು ಇನ್ನೊಂದು ಸಭೆ ಏರ್ಪಡಿಸುತ್ತೇವೆ. ಅಲ್ಲಿ ನಿಮ್ಮ ಅಂತಿಮ ನಿರ್ಣಯ ತಿಳಿಸಿ. ಅಲ್ಲೂ ಬಗೆಹರಿಯದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ಹೋಗೋಣ ಎಂದು ಹೇಳಿದರು.

ಸ್ವಾಧೀನ ಜಮೀನು ಮಾಲೀಕರಿಗೆ ಉತ್ತಮ ಪರಿಹಾರ
ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಕೂಡ ಅಗತ್ಯವಾಗಿದೆ. ಏಕೆಂದರೆ, ಇದರಲ್ಲಿ ಬಂಡವಾಳ ಹೂಡಿಕೆ ಮತ್ತು ಯುವಜನರಿಗೆ ಉದ್ಯೋಗಸೃಷ್ಟಿಯ ಪ್ರಶ್ನೆ ಇದೆ. ಹಾಗೆಂದ ಮಾತ್ರಕ್ಕೆ ಸರ್ಕಾರವು ವಿರುದ್ಧವಾಗಿಲ್ಲ. ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಒಳ್ಳೆಯ ಪರಿಹಾರ ಕೊಡಲಾಗುವುದು. ಇದು ಬೇಡದೆ ಹೋದರೆ, ಕೆಐಎಡಿಬಿ ವತಿಯಿಂದ ಅಭಿವೃದ್ಧಿಪಡಿಸಲಾಗುವ ಬಡಾವಣೆಯಲ್ಲಿ ಪ್ರತೀ ಒಂದು ಎಕರೆ ಸ್ವಾಧೀನಕ್ಕೆ10,800 ಚದುರ ಅಡಿ ಜಾಗವನ್ನು ಪರಿಹಾರದ ರೂಪದಲ್ಲಿ ನೀಡುವುದಕ್ಕೂ ಅವಕಾಶವಿದೆ. ಈ ಜಮೀನನ್ನು ರೈತರು ವಾಣಿಜ್ಯೋದ್ದೇಶಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
ಕೆಐಎಡಿಬಿ ಕೇವಲ ದೇವನಹಳ್ಳಿಯ ಸುತ್ತಮುತ್ತ ಮಾತ್ರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ. ಉದ್ಯಮಗಳಿಗಾಗಿ ರಾಜ್ಯದ ಎಲ್ಲ ಕಡೆಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ. ಏಕೆಂದರೆ, ರಾಜ್ಯದ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳು ನೆಲೆಯೂರುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ರೈತ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ಸಭೆಯಲ್ಲಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ, ಕೆಐಎಡಿಬಿ ಸಿಇಒ ಡಾ.ಮಹೇಶ್ ಉಪಸ್ಥಿತರಿದ್ದರು.












Click it and Unblock the Notifications