ಡೆಂಗ್ಯೂ ಸೊಳ್ಳೆಗೆ ನಗರದಲ್ಲಿ ಇಬ್ಬರು ಬಲಿ: ಸೊಳ್ಳೆ ಹೆಚ್ಚಾಗದಂತೆ ತಡೆಯಲು ಬಿಬಿಎಂಪಿ ಕ್ರಮ
ಬೆಂಗಳೂರು ಜೂನ್ 29: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆ ಹೆಚ್ಚಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ನಗರದಲ್ಲಿ ಡೆಂಗ್ಯೂ ಸೊಳ್ಳೆ ಕಡಿತಕ್ಕೆ 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಅಲ್ಲದೆ 80 ವರ್ಷದ ವೃದ್ಧೆ ಡೆಂಗ್ಯೂಗೆ ಬಲಿಯಾಗಿದ್ದಾರೆ. ಇದರಿಂದಾಗಿ ಬಿಬಿಎಂಪಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಈ ಹಿಂದೆ ಹಾವೇರಿಯಲ್ಲಿ ಡೆಂಗ್ಯೂವಿಗೆ ಮೊದಲ ಸಾವು ಸಂಭವಿಸಿತ್ತು. ಇದಾದ ಬಳಿಕ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಬಿಬಿಎಂಪಿ ಮಾತ್ರ ಪ್ರಕರಣಗಳು ಹೆಚ್ಚಾಗುತ್ತಿರುವ ಕಡೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆಕ್ರೋಶಗೊಂಡಿದ್ದಾರೆ.

ಮಳೆ ಈಗಿನ್ನು ಹೆಚ್ಚಾಗುತ್ತಿದೆ. ನಿರೀಕ್ಷೆಯಂತೆ ಮಳೆ ಆರಂಭವಾಗಿಲ್ಲ. ಅದಾಗಲೇ ನಗರದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾದಾಗಿನಿಂದ ಮಕ್ಕಳು ಹಾಗೂ ವಯಸ್ಸಾದವರು ಇರುವ ಮನೆಗಳಲ್ಲಿ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ 2457 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು ಎಚ್ಚರಿಕೆಯಿಂದಿರಲು ಸಿಎಂ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಕೂಡ ಸೊಳ್ಳೆ ಹೆಚ್ಚಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದೆ. ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಸೊಳ್ಳೆಗಳ ಲಾರ್ವಾ ಪತ್ತೆ ಹಚ್ಚುತ್ತಿದ್ದಾರೆ. ಜೊತೆಗೆ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ.

ರಾಜ್ಯದಲ್ಲೀಗ ಸುಮಾರು 5187 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಸೇರಿದಂತೆ ಹಾವೇರಿ, ಮೈಸೂರು ಇತರ ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಕೇವಲ ಆರು ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 140%ರಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.
ನಗರದ ಮಹದೇವಪುರ ಮತ್ತು ಪೂರ್ವ ವಲಯಗಳಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಡೆಂಗ್ಯೂ ಜ್ವರದ ಲಕ್ಷಣಗಳೇನು?
* ತಲೆನೋವು
* ವಾಕರಿಕೆ
* ವಾಂತಿ
* ವಿಸ್ತರಿಸಿದ ಗ್ರಂಥಿಗಳು
* ಮೊಡವೆ
* ಜಂಟಿ, ಸ್ನಾಯು ಅಥವಾ ಮೂಳೆ ಅಸ್ವಸ್ಥತೆ
* ಕಣ್ಣುಗಳ ಹಿಂಭಾಗ ನೋವು ಉಂಟು ಮಾಡುತ್ತದೆ
ಡೆಂಗ್ಯೂ ಸೋಂಕು ತೀವ್ರವಾದರೆ ಈ ಲಕ್ಷಣ ಗೋಚರ
* ಆಯಾಸ
* ಕಿರಿಕಿರಿ ಮತ್ತು ಚಡಪಡಿಕೆ
* ಭಯಾನಕ ಹೊಟ್ಟೆ ನೋವು
* ನಿರಂತರ ವಾಂತಿ
* ಮೂಗು ಅಥವಾ ಒಸಡುಗಳಿಂದ ರಕ್ತಸ್ರಾವ
* ನಿಮ್ಮ ಮಲ, ಮೂತ್ರ ಅಥವಾ ವಾಂತಿಯಲ್ಲಿ ರಕ್ತಸ್ರಾವ
* ಮೂಗೇಟುಗಳನ್ನು ಹೋಲುವ ಚರ್ಮದ ಅಡಿಯಲ್ಲಿ ರಕ್ತಸ್ರಾವ
* ಕಷ್ಟ ಮತ್ತು ತ್ವರಿತ ಉಸಿರಾಟ
ಡೆಂಗ್ಯೂ ರೋಗವನ್ನು ತಡೆಯುವುದು ಹೇಗೆ?
* ರೋಗ ನಿರೋಧಕಗಳನ್ನು ನೀಡುವಂತೆ ಸೂಚನೆ
* ಸೊಳ್ಳೆಗಳಿಗೆ ಗೂಡು ಕಟ್ಟಲು ಸ್ಥಳ ಒದಗಿಸುವುದನ್ನು ತಪ್ಪಿಸಬೇಕು
* ಕಂಟೇನರ್‌ಗಳು ಮತ್ತು ಬಳಸಿದ ಟೈರ್‌ಗಳಂತಹ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಏಕೆಂದರೆ ಇಂಥ ಪ್ರದೇಶದಲ್ಲಿಯೇ ಸೊಳ್ಳೆಗಳು ಮೊಟ್ಟೆಯನ್ನು ಇಡುತ್ತವೆ
* ಪರದೆಯಿಲ್ಲದ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚುವುದು
* ಮಕ್ಕಳು ಹೊರಗಡೆ ಇರುವಾಗಲೆಲ್ಲಾ ಉದ್ದನೆಯ ತೋಳುಗಳು ಮತ್ತು ಪ್ಯಾಂಟ್‌ಗಳನ್ನು ಧರಿಸಬೇಕು
* ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದೆಯಿಂದ ಅವರ ಹಾಸಿಗೆಗಳನ್ನು ಮುಚ್ಚಬೇಕು
ಡೆಂಗ್ಯೂ ಸೋಂಕು ಎಷ್ಟು ದಿನಗಳವರೆಗೂ ಇರುವುದು?
ಡೆಂಗ್ಯೂ ಸೋಂಕು ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೂ ಇರುತ್ತದೆ. ಸೋಂಕು ತಗುಲಿರುವ ಸೊಳ್ಳೆಯು ಕಚ್ಚಿದ 2 ರಿಂದ 4 ವಾರಗಳಿಂದ ಜ್ವರ ಪ್ರಾರಂಭ ಆಗುತ್ತದೆ.
ಚಿಕ್ಕಮಗಳೂರಿನಲ್ಲಿ ಡೆಂಗ್ಯೂಗೆ ಬಾಲಕಿ ಬಲಿ
ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ ಚಿಕಿತ್ಸೆ ಫಲಿಸದೆ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯ ತಂದೆ ಆಸಿಫ್ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಸಾನಿಯಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.
ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗಳ ಮೃತ ದೇಹದ ಮುಂದೆ ನಿಂತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 'ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಕ್ತಿಲ್ಲ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ. ತರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications