Dengue: ಬೆಂಗಳೂರಿಗರೇ ಎಚ್ಚರ, ಒಂದೇ ತಿಂಗಳಲ್ಲಿ 2,374 ಡೆಂಗ್ಯೂ ಪ್ರಕರಣ ವರದಿ: ಬಿಬಿಎಂಪಿ
ಬೆಂಗಳೂರು, ಸೆಪ್ಟಂಬರ್ 07: ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಕಾಯಿಲೆಗೆ ಒಳಗಾಗುತ್ತಿರುವವರ ಸಂಖ್ಯೆ ಅನಿರೀಕ್ಷಿತ ಮಟ್ಟದಲ್ಲಿ ಏರಿಕೆ ಆಗಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ಬಿಬಿಎಂಪಿ ಆರೋಗ್ಯ ವರದಿಯಲ್ಲಿ ಆಗಸ್ಟ್ ಒಂದೇ ತಿಂಗಳಲ್ಲಿ ಬರೊಬ್ಬರಿ 2,374 ಡೆಂಗ್ಯೂ ಪ್ರಕರಣಗಳು ವರದಿ ಆಗಿದೆ. ಈ ಸಂಬಂಧ ಬಿಬಿಎಂಪಿ ಹೈ ಅಲರ್ಟ್ ಆಗಿದೆ.
ವಾರದಿಂದ ವಾರಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಾರೆ ಬಂದಿದೆ. ಈ ಸಂಬಂಧ ನಿಮ್ಮ ಮನೆಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲ ಹಿನ್ನೆಲೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಏಕೆಂದರೆ ಡೆಂಗ್ಯೂ ಹರಡುವ ಸೊಳ್ಳೆಗಳು ಇಂತಹ ನಿಂತ ನೀರಿನಲ್ಲಿ ಉತ್ಪತ್ತಿ ಆಗುತ್ತವೆ. ಆದ್ದರಿಂದ ಸದಾ ಜಾಗೃತರಾಗಿರುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಜ್ವರ, ಆಯಾಸದಂತೆ ಲಕ್ಷಣಗಳಿಂದ ಸಾಕಷ್ಟು ಮಂದಿ ಆಸ್ಪತ್ರೆಗೆ ಬರುತ್ತಿದ್ದಾರೆ. ತಪಾಸಣೆ ಬಳಿಕ ಅವರಿಗೆ ಡೆಂಗ್ಯೂ ಬಂದಿರುವುದು ಗೊತ್ತಾಗಿದೆ. ಇಂತಹ ಲಕ್ಷಣಗಳು ಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡುವಂತೆ ಬಿಬಿಎಂಪಿ ಕೋರಿದೆ.
ಕರ್ನಾಟಕದ ವಿವಿಧೆಡೆ ಸಹ ಈ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಜೂನ್ ತಿಂಗಳಲ್ಲಿ ಕೇವಲ 689 ರಷ್ಟು ಡೆಂಗ್ಯೂ ಪ್ರಕರಣಗಳು ವರದಿ ಆಗಿದ್ದವು. ನಂತರದ ಜುಲೈ ತಿಂಗಳಲ್ಲಿ ಎರಡು ಪಟ್ಟು ಪ್ರಕರಣಗಳು ಹೆಚ್ಚಾಗಿದ್ದು, ಒಟ್ಟು 1,649 ಮಂದಿಗೆ ಡೆಂಗ್ಯೂ ಕಾಯಿಲೆ ವರದಿ ಆಗಿವೆ.
ಸೆಪ್ಟಂಬರ್‌ನಲ್ಲಿ 181 ಪ್ರಕರಣ ವರದಿ
ಇನ್ನೂ ಕಳೆದ ಆಗಸ್ಟ್ ತಿಂಗಳಲ್ಲಿ ಮತ್ತೆ ಅತ್ಯಧಿಕ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣ (2,374 ಕೇಸ್) ಏರಿಕೆ ಆಗಿದೆ. ಇನ್ನೂ ಸೆಪ್ಟಂಬರ್ ಮೊದಲ ವಾರದ (ಸೆ. 6ರವರೆಗೆ) 181 ಪ್ರಕರಣಗಳು ಈಗಾಗಲೇ ವರದಿ ಆಗಿವೆ. ಇದರಲ್ಲಿ ಬಿಬಿಎಂಪಿಯ ದಕ್ಷಿಣ, ಪಶ್ಚಿಮ ಮತ್ತು ಮಹಾದೇವಪುರ ವಲಯದಲ್ಲಿ ಅತ್ಯಧಿಕ ಕೇಸುಗಳು ಪತ್ತೆಯಾಗಿವೆ.

ಈ ಸಂಬಂಧ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ನಗರಾದ್ಯಂತ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ಕಾಯಲೆ, ಸ್ವಚ್ಚತೆ ಮತ್ತು ಲಕ್ಷಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಡೆಂಗ್ಯೂ: ಬಿಬಿಎಂಪಿ ಕೈಗೊಂಡ ಕ್ರಮಗಳೇನು?
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಕಾಯಿಲೆಗೆ ಹೆಚ್ಚೆಚ್ಚು ಜನ ಒಳಗಾಗುತ್ತಿರುವದರಿಂದ ಪ್ರಕರಣಗಳ ನಿಯಂತ್ರಿಸುವ ಸಲುವಾಗಿ ಎಲ್ಲ 198 ವಾರ್ಡ್ ಗಳಲ್ಲಿಯೂ ಸೊಳ್ಳೆ ನಿಯಂತ್ರಣ, ಜಾಗೃತಿ ಮೂಡಿಸುವ ಹಾಗೂ ಔಷಧಿ ಸಿಂಪಡಣೆ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗಿದೆ. ಇದು ಮುಂದಿನ ಆದೇಶವರೆಗೆ ಮುಂದುವರಿಯಲಿದೆ. ಶಾಲಾ ಕಾಲೇಜುಗಳಿಂದ ಡೆಂಗ್ಯೂ ಬಗ್ಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ನೀರು ನಿಂತ ಸ್ಥಳಗಳಲ್ಲಿ ಮತ್ತು ಮೋರಿಗಳಿಗೆ ಔಷಧಿ ಸಿಂಪಡಿಲಾಗುತ್ತಿದೆ. ತ್ಯಾಜ್ಯ ಸಂಗ್ರಹ ವಾಹನಗಳ ಮೂಲಕ ಧ್ವನಿವರ್ಧಕ ಬಳಸಿ ಕಾಯಿಲೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಕೊಳಚೆ ಹಾಗೂ ಇನ್ನೀತರೇ ಪ್ರದೇಶಗಳಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ, ನಗರ ಪ್ರಾಥಮಿಕ ಆರೋಗ್ಯಾಧಿಕಾರಿಗಳು ಡೆಂಗ್ಯೂ ಪ್ರಕರಣಗಳ ಪತ್ತೆ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications