ಲೋಕಸಭೆಯಲ್ಲಿ ಬೆಂಗಳೂರಿನ ಸೋಲು: ಕಾಂಗ್ರೆಸ್‌ಗೆ ಬಿಬಿಎಂಪಿ ಚುನಾವಣೆ ಚಿಂತೆ!
ಬೆಂಗಳೂರು, ಜೂನ್ 06; ಲೋಕಸಭೆ ಚುನಾವಣೆ 2024ರ ಫಲಿತಾಂಶ ಮುಂಬರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಕಾಂಗ್ರೆಸ್ ಬೆಂಗಳೂರು ನಗರದಲ್ಲಿ ಮೂರು ಸ್ಥಾನಗಳಲ್ಲಿ ಸೋಲು ಕಂಡಿದ್ದು, ಬಿಬಿಎಂಪಿ ಚುನಾವಣೆ ಟಿಕೆಟ್ ನಿರೀಕ್ಷೆಯಲ್ಲಿದ್ದ ನಾಯಕರಿಗೆ ಸಂಕಷ್ಟ ಎದುರಾಗಿದೆ.
ಬಿಬಿಎಂಪಿ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದರಿಂದಾಗಿ ಬಿಬಿಎಂಪಿ ಚುನಾವಣೆಯಲ್ಲಿ ಮಾಜಿ ಸದಸ್ಯರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ.

ಬೆಂಗಳೂರು ಉತ್ತರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 2,59,746 ಮತಗಳ ಅಂತರದಿಂದ ಕಾಂಗ್ರೆಸ್‌ನ ಎ. ವಿ. ರಾಜೀವ್ ಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ತೇಜಸ್ವಿ ಸೂರ್ಯ 2,77,083 ಮತಗಳ ಅಂತರದಿಂದ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ವಿರುದ್ಧ ಗೆಲುವು ಸಾಧಿಸಿದರು.
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪಿ. ಸಿ. ಮೋಹನ್‌ಗೆ ಕಾಂಗ್ರೆಸ್‌ನ ಮನ್ಸೂರ್ ಖಾನ್ ಪ್ರಬಲ ಪೈಪೋಟಿ ನೀಡಿದರು, ಅಂತಿಮವಾಗಿ 32,707 ಮತಗಳ ಅಂತರದಲ್ಲಿ ಪಿ. ಸಿ. ಮೋಹನ್ ಗೆದ್ದರು.
ನಾಯಕರ ವಿರುದ್ಧ ಆಕ್ರೋಶ: ಲೋಕಸಭೆ ಚುನಾವಣೆ ಸೋಲಿನ ಬಳಿಕ ಬೆಂಗಳೂರು ಉತ್ತರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜೀದ್ ಮತ್ತು ಬೆಂಗಳೂರು ಕೇಂದ್ರದ ಅಧ್ಯಕ್ಷ ಉದಯ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಇಬ್ಬರೂ ನಾಯಕರು ಸಹ ಬಿಬಿಬಿಎಂಪಿ ಚುನವಣೆಯ ಟಿಕೆಟ್ ಬಯಸಿದ್ದರು.
ಈ ನಾಯಕರು ಕಾರ್ಯಕರ್ತರ ಜೊತೆ ಉತ್ತಮ ನಂಟು ಹೊಂದಿಲ್ಲ. ತಮ್ಮ ವಾರ್ಡ್ ಬಿಟ್ಟು ಬೇರೆ ವಾರ್ಡ್‌ಗಳ ಮೇಲೆ ಹಿಡಿತ ಹೊಂದಿಲ್ಲ ಎಂಬುದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಆರೋಪ. ಆದ್ದರಿಂದ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಈ ನಾಯಕರ ಬದಲು ಬೇರೆಯವರಿಗೆ ಟಿಕೆಟ್ ನೀಡಿ ಎಂಬ ಕೂಗು ಆರಂಭವಾಗಿದೆ.
ಬಿಬಿಎಂಪಿ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯುವ ನಿರೀಕ್ಷೆ ಇದೆ. ಆದ್ದರಿಂದ ಕಾಂಗ್ರೆಸ್ ಏಕಾಂಗಿಯಾಗಲಿದ್ದು, ಈಗಿನಿಂದಲೇ ಚುನಾವಣೆ ಎದುರಿಸಲು ಕಾಂಗ್ರೆಸ್ ಹೊಸ ಕಾರ್ಯತಂತ್ರವನ್ನು ರೂಪಿಸಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸಚಿವರಾದ ಕೃಷ್ಣ ಬೈರೇಗೌಡ ವ್ಯಾಪ್ತಿಗೆ ಬರುವ ಬೆಂಗಳೂರು ಉತ್ತರ, ದಿನೇಶ್ ಗುಂಡೂರಾವ್ ವ್ಯಾಪ್ತಿಗೆ ಬರುವ ಬೆಂಗಳೂರು ಕೇಂದ್ರದಲ್ಲಿ ಹಿನ್ನಡೆಯಾಗಿದ್ದು, ಬಿಬಿಎಂಪಿ ಚುನಾವಣೆ ಬಗ್ಗೆ ಈಗಲೇ ಚಿಂತಿಸುವಂತೆ ಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡದ ಮುಖಂಡರಿಗೆ ಬಿಬಿಎಂಪಿ ಚುನಾವಣೆ ಟಿಕೆಟ್ ನೀಡುವುದಿಲ್ಲ ಎಂದು ಕಾಂಗ್ರೆಸ್ ಈಗಾಗಲೇ ಹೇಳಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಿದ ಬಳಿಕ ಮೊದಲ ಬಾರಿಗೆ ಬಿಬಿಎಂಪಿ ಚುನಾವಣೆ ನಡೆಯುತ್ತಿದ್ದು, ಬೆಂಗಳೂರು ನಗರದ ಆಡಳಿತ ಯಾರ ಕೈಗೆ ಎಂದು ಕಾದು ನೋಡಬೇಕಿದೆ.
2015ರ ಚುನಾವಣೆ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕೌನ್ಸಿಲ್ ಅವಧಿ 2020ರ ಸೆಪ್ಟೆಂಬರ್ 10ರಂದು ಅಂತ್ಯಗೊಂಡಿದೆ. ಬಳಿಕ ಕರ್ನಾಟಕ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. 4 ವರ್ಷಗಳು ಕಳೆದರೂ ಸಹ ವಿವಿಧ ಕಾರಣಕ್ಕೆ ಬಿಬಿಎಂಪಿ ಚುನಾವಣೆ ಮುಂದೂಡಲಾಗುತ್ತಿದೆ. ಈ ಮೊದಲು ಬಿಬಿಎಂಪಿ 198 ವಾರ್ಡ್‌ಗಳನ್ನು ಹೊಂದಿತ್ತು. ಈಗ ವಾರ್ಡ್‌ಗಳ ಸಂಖ್ಯೆಯನ್ನು 248ಕ್ಕೆ ಏರಿಕೆ ಮಾಡಲಾಗಿದೆ.












Click it and Unblock the Notifications