Bengaluru-Mysuru Expressway: ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ
ಬೆಂಗಳೂರು, ಡಿಸೆಂಬರ್ 15: ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡುವಲ್ಲಿ ಎಕ್ಸ್‌ಪ್ರೆಸ್ ವೇ ಪ್ರಮುಖ ಪಾತ್ರ ವಹಿಸಿದೆ. ಈ ಹೆದ್ದಾರಿ ಉದ್ಘಾಟನೆಗೂ ಮೊದಲು ಮತ್ತು ಬಳಿಕ ರಸ್ತೆ ಅಪಘಾತಗಳಿಂದ ಸುದ್ದಿಯಾಗಿದ್ದೇ ಅಧಿಕ. ಸಂಚಾರಿ ಪೊಲೀಸರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಅನೇಕ ಕ್ರಮಗಳನ್ನು ಕೈಗೊಂಡಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ.
ಕರ್ನಾಟಕ ಸಂಚಾರ ಮತ್ತು ರಸ್ತೆ ಸುರಕ್ಷತೆ ಇಲಾಖೆ ಅಂಕಿ-ಅಂಶಗಳ ಮಾಹಿತಿ ಪ್ರಕಾರ ಎಕ್ಸ್‌ಪ್ರೆಸ್ ವೇನಲ್ಲಿ ರಸ್ತೆ ಅಪಘಾತಗಳು ಶೇ 75ರಷ್ಟು ಇಳಿಮುಖವಾಗಿದೆ. ಜುಲೈ 2024ರಲ್ಲಿ ಹೆದ್ದಾರಿಯಲ್ಲಿ ಸುಧಾರಿತ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಎಟಿಎಂಎಸ್) ಸ್ಥಾಪನೆಯ ನಂತರ ರಸ್ತೆ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ.

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ 2023ರಲ್ಲಿ 188 ರಸ್ತೆ ಅಪಘಾತಗಳು ನಡೆದಿದ್ದವು. 2024ರಲ್ಲಿ 84 ಅಪಘಾತಗಳು ನಡೆದಿವೆ. ಅಲ್ಲದೇ ಕಳೆದ ಎರಡು ತಿಂಗಳಿನಲ್ಲಿ ಈ ಹೆದ್ದಾರಿಯಲ್ಲಿ ರಸ್ತೆ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉಭಯ ನಗರಗಳ ನಡುವೆ ಸಂಚಾರ ನಡೆಸುವ ವಾಹನ ಸವಾರರಿಗೆ ಇದು ನೆಮ್ಮದಿ ತರುವ ಸುದ್ದಿಯಾಗಿದೆ.
ಅಂಕಿ-ಅಂಶಗಳ ಮಾಹಿತಿ: ನವೆಂಬರ್ 2024ರ ತನಕ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ 117 ಕಿ. ಮೀ. ಹೆದ್ದಾರಿಯಲ್ಲಿ ನಡೆದ ಅಪಘಾತಗಳ ಸಂಖ್ಯೆ 84. ಅಲ್ಲದೇ ಗಾಯಗೊಳ್ಳುವ ಪ್ರಕರಣಗಳು ಸಹ ಇಳಿಮುಖವಾಗಿದೆ. 2023ರಲ್ಲಿ 580 ಪ್ರಕರಣಗಳಿದ್ದರೆ, 2024ರಲ್ಲಿ ಇದು 355ಕ್ಕೆ ಇಳಿಕೆಯಾಗಿದೆ.
2023ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದರು. ಆದರೆ ಈ ರಸ್ತೆ ರಸ್ತೆ ಅಪಘಾತಗಳ ಕಾರಣದಿಂದಲೇ ಭಾರೀ ಸುದ್ದಿ ಮಾಡಿತು.
2023ರಲ್ಲಿ ಈ ರಸ್ತೆಯಲ್ಲಿ ನಡೆದ 523 ಅಪಘಾತಗಳಲ್ಲಿ 158 ಜನರು ಸಾವನ್ನಪ್ಪಿದ್ದರು. ಆದ್ದರಿಂದ ಈ ರಸ್ತೆಯ ಸುರಕ್ಷತೆಯ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಪೊಲೀಸರು ಮಂಡ್ಯ, ರಾಮನಗರ ಜಿಲ್ಲಾ ಪೊಲೀಸರ ಜೊತೆ ಸೇರಿ ರಸ್ತೆ ಅಪಘಾತ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದರು.
ರಸ್ತೆ ಉದ್ಘಾಟನೆಯಾದಾಗ ವಾಹನ ಸವಾರರು ಗಂಟೆಗೆ 130-140 ಕಿ. ಮೀ. ವೇಗದಲ್ಲಿ ಸಂಚಾರವನ್ನು ನಡೆಸುತ್ತಿದ್ದರು. ಇದಕ್ಕಾಗಿ ಪೊಲೀಸರು ಎಟಿಎಂಎಸ್ ಸ್ಥಾಪನೆ ಮಾಡಿದ್ದು, ಈಗ ವಾಹನ ಸವಾರರ ವೇಗದ ಮೇಲೆ ಕ್ಯಾಮರಾ ಕಣ್ಣಿಟ್ಟಿದೆ. ವಾಹನ 100 ಕಿ. ಮೀ. ವೇಗಕ್ಕಿಂತ ಹೆಚ್ಚಿಗೆ ಸಾಗಿದರೆ ದಂಡದ ಚಲನ್ ಮೊಬೈಲ್‌ಗೆ ಬರುವಂತೆ ವ್ಯವಸ್ಥೆ ಮಾಡಿದ್ದಾರೆ.
ಅತಿಯಾದ ವೇಗ ಥ್ರಿಲ್ ಕೊಡುತ್ತದೆ, ಆದರೆ ಇದು ಕೊಲ್ಲುತ್ತದೆ. ಇದನ್ನು ಎಲ್ಲಾ ವಾಹನ ಸವಾರರು ಗಮನದಲ್ಲಿಟ್ಟುಕೊಂಡು ಸಂಚಾರ ನಿಯಮಗಳನ್ನು ಪಾಲಿಸಬೇಕು. ಎಟಿಎಂಎಸ್ ಸ್ಥಾಪನೆ ಕ್ರಮ ಉತ್ತಮ ಪರಿಹಾರವಾಗಿದೆ. ಯಾವುದೇ ಜನರು ಹಣ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 1/8/2023 ರಿಂದಲೇ ಬೈಕ್ ಹಾಗೂ ತ್ರಿಚಕ್ರ ವಾಹನಗಳಿಗೆ ಸಂಚಾರ ನಿಷೇಧಿಸಿದೆ. ಬೈಕ್ ಹಾಗೂ ತ್ರಿಚಕ್ರ ವಾಹನಗಳು ಪ್ರವೇಶ ನಿಯಂತ್ರಿತ ಹೆದ್ದಾರಿಯ ಎರಡೂ ಬದಿಯಲ್ಲಿ ಒದಗಿಸಲಾದ 7 ಮೀಟರ್ ಅಗಲದ, ದ್ವಿಪಥದ ಸೇವಾ ರಸ್ತೆಯನ್ನು ಯಾವುದೇ ಶುಲ್ಕವನ್ನು ಪಾವತಿ ಮಾಡದೇ ಬಳಸಲು ಅನುಕೂಲ ಮಾಡಿಕೊಡಲಾಗಿದೆ.
ಹೆದ್ದಾರಿಯನ್ನು ಅತಿವೇಗದ (ಹೈ-ಸ್ಪೀಡ್ ಕಾರಿಡಾರ್) ಅಭಿವೃದ್ಧಿಗೊಳಿಸಲಾಗಿದೆ.
ವಿವಿಧ ರೀತಿಯ ವಾಹನಗಳಿಗೆ ಗಂಟೆಗೆ 80-100 ಕಿ. ಮೀ. ವೇಗದ ಮಿತಿಗಳಿದೆ. ಆದ್ದರಿಂದ, ಬೈಕ್ ಮತ್ತು ತ್ರಿಚಕ್ರ ವಾಹನಗಳಂತಹ ನಿಧಾನವಾಗಿ ಚಲಿಸುವ ವಾಹನಗಳು ಕಾರಿಡಾರ್ ಅನ್ನು ಬಳಸುವುದರಿಂದ ಅಪಘಾತ ಹೆಚ್ಚಾಗುವ ಹಿನ್ನಲೆಯಲ್ಲಿ ಅವುಗಳ ಸಂಚಾರ ನಿಷೇಧಿಸಲಾಗಿದೆ.












Click it and Unblock the Notifications