Bengaluru Suburban Rail: 2026ಕ್ಕೆ ಎರಡು ಕಾರಿಡಾರ್‌ನಲ್ಲಿ ರೈಲು ಸಂಚಾರ
ಬೆಂಗಳೂರು, ಸೆಪ್ಟೆಂಬರ್ 12: ಭವಿಷ್ಯದಲ್ಲಿ ಉದ್ಯಾನ ನಗರಿ ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸಬ್ ಅರ್ಬನ್ ರೈಲು ಯೋಜನೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಯೋಜನೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗುವುದು ಯಾವಾಗ? ಎಂಬುದು ಪ್ರಶ್ನೆಯಾಗಿದೆ. ಸಬ್ ಅರ್ಬನ್ ರೈಲು ಯೋಜನೆಯಡಿ 4 ಕಾರಿಡಾರ್ ನಿರ್ಮಾಣವಾಗುತ್ತಿದೆ. ಇವುಗಳಲ್ಲಿ ಎರಡು ಕಾರಿಡಾರ್ ಕಾಮಗಾರಿ ಪೂರ್ಣಗೊಳಿಸಲು ಹೊಸ ಗಡುವು ಈಗ ನೀಡಲಾಗಿದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರೈಲ್ವೆ ಅಧಿಕಾರಿಗಳ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಿದರು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಪ್ರಗತಿಯ ಕುರಿತು ಮಾಹಿತಿಯನ್ನು ಪಡೆದರು. ಎರಡು ಕಾರಿಡಾರ್ ಪೂರ್ಣಗೊಳ್ಳಲು ನೀಡಿದ್ದ ಗಡುವು ವಿಸ್ತರಣೆ ಮಾಡಿದರು. ಸದ್ಯದ ಮಾಹಿತಿ ಪ್ರಕಾರ 2026ರ ಡಿಸೆಂಬರ್‌ನಲ್ಲಿ ಎರಡು ಕಾರಿಡಾರ್ ಕಾಮಗಾರಿ ಪೂರ್ಣಗೊಳ್ಳಲಿದೆ.

ಯಾವ-ಯಾವ ಕಾರಿಡಾರ್?; 25.01 ಕಿ. ಮೀ. ಉದ್ದದ ಬೆನ್ನಿಗಾನಹಳ್ಳಿ-ಚಿಕ್ಕಬಣಾವರ ಕಾರಿಡಾರ್-2 ಮತ್ತು 46.88 ಕಿ. ಮೀ. ಉದ್ದದ ಕಾರಿಡಾರ್-4 ಹೀಗಲಿಗೆ-ರಾಜನಕುಂಟೆಯಲ್ಲಿ ಡಿಸೆಂಬರ್ 2026ರಲ್ಲಿ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.
2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಚಾಲನೆ ನೀಡಿದ್ದರು. 40 ತಿಂಗಳಿನಲ್ಲಿ ಅಂದರೆ 2025ರ ಆಗಸ್ಟ್‌ನಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಈ ಯೋಜನೆ ಜಾರಿಯಿಂದ ಬೆಂಗಳೂರು ನಗರಕ್ಕೆ ಆಗಮಿಸುವ ಸುಮಾರು 9.8 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಅನುದಾನದ ಕೊರತೆ, ನೈಋತ್ಯ ರೈಲ್ವೆಗೆ ಭೂಮಿ ಹಸ್ತಾಂತರ ವಿಳಂಬ, ಟೆಂಡರ್ ಪ್ರಕ್ರಿಯೆ ನಿಧಾನಗತಿ ಸೇರಿದಂತೆ ವಿವಿಧ ಕಾರಣಕ್ಕೆ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸದ್ಯಕ್ಕೆ ಪ್ರಾಥಮಿಕ ಕಾಮಗಾರಿಗಳು ನಡೆಯುತ್ತಿವೆ.
ಸಚಿವ ವಿ. ಸೋಮಣ್ಣ ಮಾತನಾಡಿ, "ಒಟ್ಟು ನಾಲ್ಕು ಸಬ್ ಅರ್ಬನ್ ರೈಲು ಕಾರಿಡಾರ್‌ಗಳ ವೆಚ್ಚ 15,767 ಕೋಟಿ ರೂ. ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 20:20ರಷ್ಟು ವೆಚ್ಚವನ್ನು ಹಂಚಿಕೆ ಮಾಡಿಕೊಂಡಿವೆ. ಉಳಿದ ಅನುದಾನವನ್ನು ಸಾಲದ ರೂಪದಲ್ಲಿ ಪಡೆಯಲಾಗುತ್ತದೆ" ಎಂದು ಹೇಳಿದ್ದಾರೆ.
ಕೆ-ರೈಡ್ ಮಾಹಿತಿ ಪ್ರಕಾರ 2022ರ ಆಗಸ್ಟ್‌ನಲ್ಲಿ 2 ಕಾರಿಡಾರ್‌ಗಳಿಗೆ 859.97 ಕೋಟಿ ರೂ.ಗಳ ಟೆಂಡರ್ ನೀಡಲಾಗಿದೆ. ಕಾರಿಡಾರ್-4ಕ್ಕೆ ಡಿಸೆಂಬರ್ 2023ರಲ್ಲಿ 1040.51 ಕೋಟಿ ರೂ. ವೆಚ್ಚದ ಟೆಂಡರ್ ನೀಡಲಾಗಿದ್ದು, ಎಲ್ &ಟಿ ಎಲ್ಲಾ ಕಾರಿಡಾರ್ ಕಾಮಗಾರಿಯನ್ನು ಕೈಗೊಳ್ಳಲಿದೆ. ಕಾರಿಡಾರ್-3 ಕೆಂಗೇರಿ-ಬೆಂಗಳೂರು ಕಂಟೋನ್ಮೆಂಟ್ ಇನ್ನೂ ರೈಲ್ವೆ ಇಲಾಖೆ ಒಪ್ಪಿಗೆಗಾಗಿ ಕಾಯುತ್ತಿದೆ.
ಸಬ್ ಅರ್ಬನ್ ರೈಲು ಯೋಜನೆಯ ಕಾರಿಡಾರ್-1 ವಿನ್ಯಾಸವನ್ನು ಜೂನ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಇದು ಎರಡು ಪ್ಯಾಕೇಜ್‌ಗಳಲ್ಲಿ ಪೂರ್ಣಗೊಳ್ಳಲಿದೆ. ಮೆಜೆಸ್ಟಿಕ್-ಯಹಂಕ 17.63 ಕಿ. ಮೀ. ಪ್ಯಾಕೇಜ್-1 ಮತ್ತು 23 ಕಿ.ಮೀ ಪ್ಯಾಕೇಜ್-2 ಯಲಹಂಕ-ದೇವನಹಳ್ಳಿ ನಡುವೆ ನಿರ್ಮಾಣವಾಗಲಿದೆ.
ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಯೋಜನೆಯ 4 ಕಾರಿಡಾರ್‌ಗಳಿಗೆ ಸಂಪಿಗೆ, ಮಲ್ಲಿಗೆ, ಪಾರಿಜಾತ, ಮತ್ತು ಕನಕ ಎಂದು ನಾಮಕರಣ ಮಾಡಲಾಗಿದೆ.












Click it and Unblock the Notifications