ನಮಗೆ ಸಿಗಲಿಲ್ಲ ಎಂದು ಕೈಕೈ ಹೊಸಕಿಕೊಳ್ಳುವ ಕಾರಣ ಬಿಜೆಪಿಯವರ ಕೈಯಲ್ಲಿ ಕೂದಲಿಲ್ಲ: ಡಿಕೆ ಶಿವಕುಮಾರ್
ಬೆಂಗಳೂರು: ಕಾರ್ಯಕರ್ತರು ಮತದಾರರ ಮನ ಗೆಲ್ಲುವತ್ತ ಗಮನ ಹರಿಸಬೇಕು. ನಾಯಕರ ವಿಚಾರವನ್ನು ನಾವು ನೋಡಿಕೊಳ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಯಶವಂತಪುರ ವಿಧಾನಸಭೆ ಕ್ಷೇತ್ರದ, ಬೇರೆ ಬೇರೆ ಪಕ್ಷಗಳ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಕರ್ನಾಟಕದ ಜನರ ಬದುಕನ್ನು ರೂಪಿಸುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆ ತಲುಪದ ಜನರನ್ನ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಲು ಭಾರತ್ ಜೋಡೋ ಸಭಾಂಗಣದಲ್ಲಿ ನಾವೆಲ್ಲಾ ಜೊತೆಯಾಗಿದ್ದೇವೆ. ಬಂಧ ಗಟ್ಟಿಯಾಗಿ ಕೋಮುವಾದಿ ಶಕ್ತಿಗಳನ್ನು ಓಡಿಸೋಣ. ಕಾಂಗ್ರೆಸ್ ಪಕ್ಷದ ರಕ್ತ ಸಾಮಾನ್ಯವಾದದ್ದಲ್ಲ, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ, ಕಾಂಗ್ರೆಸ್ಸಿಗನಾಗುವುದೆಂದರೆ ಅದು ಅಭಿಮಾನದ ಸಂಕೇತ. ಈ ರಾಷ್ಟ್ರದ ಧ್ವಜ ಯಾರ ಹೆಗಲ ಮೇಲಿದೆ ಎಂದರೆ ಅದು ಕಾಂಗ್ರೆಸ್ಸಿಗರ ಹೆಗಲ ಮೇಲೆ ಮಾತ್ರ. ನಾವೆಲ್ಲಾ ಅಭಿಮಾನದಿಂದ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳಬೇಕು ಎಂದರು.

ಬಿಜೆಪಿ ವಿರುದ್ಧ ಡಿಸಿಎಂ ವಾಗ್ದಾಳಿ
ದೇಶದ ಬಡ ಜನರಿಗೆ ಅನುಕೂಲವಾಗುವಂತಹ ನೀತಿಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಉಳುವವನೆ ಭೂಮಿ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ಪಡಿತರ ವ್ಯವಸ್ಥೆ, ಪಂಚಾಯತ್ ರಾಜ್ ಸೇರಿದಂತೆ ನಾವೆಲ್ಲಾ ಯಾವುದರ ಫಲಾನುಭವಿಗಳಾಗಿ ಬೆಳೆದಿದ್ದೇವೊ ಅದೆಲ್ಲ ಕಾಂಗ್ರೆಸ್ ಪಕ್ಷದ ಕೊಡುಗೆ. ಜನ ನೆನಪು ಮಾಡಿಕೊಳ್ಳುವಂತಹ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ ಬಿಜೆಪಿ. ಬರೀ ಬೆಲೆ ಏರಿಕೆ ಭಾಗ್ಯ ಕೊಟ್ಟಿದೆ. ಬಡವರ ಬಗ್ಗೆ ಚಿಂತೆ ಇಲ್ಲ, ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮೋದಿಯವರು ಗ್ಯಾಸ್ ಕೊಡುತ್ತೇನೆ ಎಂದು ಬಡ ಹೆಣ್ಣು ಮಕ್ಕಳ ಫೋಟೋ ಹಾಕಿದ್ದಷ್ಟೇ ಸಾಧನೆ ಎಂದು ಆರೋಪಿಸಿದರು.
ಮುನಿರತ್ನ, ಎಸ್‌ಟಿಎಸ್ ವಿರುದ್ಧ ಗರಂ
ಜನರಿಂದ ಮಾಡುತ್ತಿರುವ ಲೂಟಿಯನ್ನ ತಡೆಯಲು ಗ್ಯಾರಂಟಿ ಯೋಜನೆಗಳನ್ನ ತಂದಿದ್ದೇವೆ. ನೀವು ಇದನ್ನು ಮನೆ, ಮನಗಳಿಗೆ ತಲುಪಿಸಿ. ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಬೇಕು ಎಂದು ಇದೇ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಅವರು ಹಠ ಮಾಡಿ 40 ಜನ ಎಂಎಲ್‌ಎಗಳ ಸಹಿ ಹಾಕಿಸಿ ಕೊಟ್ಟಿದ್ದರು. ಅವರ ಕ್ಷೇತ್ರಗಳ ಜನರ ಮನೆಯ ಮೇಲೆ ಕಾಂಗ್ರೆಸ್ ಧ್ವಜದ ಚಿತ್ರಗಳನ್ನು ಹಾಕಿಸಿದ್ದರು. ಈಗ ಪೂರ್ತಿ ಕೇಸರಿ ಬಣ್ಣ ಬಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜೀವ್ ಗಾಂಧಿ ಭೇಟಿ ನೆನಪು
ಯುವ ಸಮಾವೇಶದ ಸಲುವಾಗಿ ದೆಹಲಿಗೆ ಹೋಗಿದ್ದಾಗ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ ಅವರನ್ನ ನಿವಾಸದಲ್ಲಿ ಭೇಟಿಯಾಗಲು ಕಾಯುತ್ತಿದ್ದೆವು, ಅಲ್ಲಿಗೆ ಹಿರಿಯ ನಾಯಕರೊಬ್ಬರು ಬಂದರು, ಅವರನ್ನು ಸ್ವತಃ ರಾಜೀವ್ ಗಾಂಧಿ ಅವರೇ ಹೋಗಿ ಕರೆದುಕೊಂಡು ಬಂದರು. ನಾವೆಲ್ಲ ಯಾರು ಎಂದು ಕುತೂಹಲದಿಂದ ಕೇಳಿದೆವು. ಅವರು ಬಾಬು ಜಗಜೀವನ್ ರಾಮ್. ನೆಹರು, ಇಂದಿರಾ ಗಾಂಧಿ ಅವರ ಜೊತೆ ಕೆಲಸ ಮಾಡಿದವರು. ಅನಿವಾರ್ಯ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿದ್ದರು, ಈಗ ಪಕ್ಷಕ್ಕೆ ಮತ್ತೆ ಸೇರಬೇಕಂತೆ, ಕಾಂಗ್ರೆಸ್ಸಿಗನಾಗಿ ನಾನು ಪ್ರಾಣ ಬಿಡುವ ನನ್ನ ಆಸೆ ಎಂದು ಹೇಳಿದರಂತೆ ಈ ಘಟನೆ ಕೇಳಿದ ನಮಗೆ ಪಕ್ಷದಲ್ಲಿ ಇರುವ ನಾವೆಲ್ಲಾ ಪುಣ್ಯವಂತರು ಎಂದು ಅನಿಸಿತು.
ಅಕ್ಬರ್ ಬಿರ್‌ಬಲ್ಲನಿಗೆ ಕೇಳಿದರಂತೆ ಏಕೆ ಮನುಷ್ಯನಿಗೆ ಅಂಗೈಯಲ್ಲಿ ಕೂದಲು ಇಲ್ಲ ಎಂದು, ಅದಕ್ಕೆ ಬೀರ್ ಬಲ್ ಹೇಳಿದನಂತೆ, ನೀವು ದೊರೆಗಳಾದ ಕಾರಣಕ್ಕೆ ದಾನ ಕೊಟ್ಟು, ಕೊಟ್ಟು ಅಂಗೈಯಲ್ಲಿ ಕೂದಲಿಲ್ಲ, ಇವರೆಲ್ಲಾ ತೆಗೆದುಕೊಳ್ಳುವವರು ಅದಕ್ಕೆ ಅವರ ಅಂಗೈಯಲ್ಲೂ ಕೂದಲಿಲ್ಲ, ಹಾಗಾದ್ರೆ ಜನರ ಅಂಗೈಯಲ್ಲಿ ಏಕೆ ಕೂದಲಿಲ್ಲ ಎಂದು ಮರು ಪ್ರಶ್ನೆ ಹಾಕಿದರಂತೆ ಅಕ್ಬರ್ "ನಮಗೆ ಸಿಗಲಿಲ್ಲ ಎಂದು ಕೈ, ಕೈ ಹೊಸಕಿಕೊಳ್ಳುವ ಕಾರಣ ಕೂದಲಿಲ್ಲ" ಎಂದು ಹೇಳಿದ್ದ. ಇದು ಪರಿಸ್ಥಿತಿ ಬಿಜೆಪಿಯವರದ್ದಾಗಿದೆ, ನಾವು ಗ್ಯಾರಂಟಿ ಕೊಟ್ಟ ನಂತರ ಕೈ, ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.











Click it and Unblock the Notifications