Darshan Thoogudeepa: ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
ಬೆಂಗಳೂರು, ಸೆಪ್ಟಂಬರ್ 23: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟ ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಕೋರಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಸೆಪ್ಟಂಬರ್ 25ಕ್ಕೆ ಮುಂದೂಡಲಾಗಿದೆ. ಈ ಮೂಲಕ ಜಾಮೀನು ಸಿಗುವ ಆಸೆಯಲ್ಲಿದ್ದ ಆರೋಪಿಗೆ ನಿರಾಸೆಯಾಗಿದೆ.ಮತ್ತೆ ಪವಿತ್ರಾಗೌಡಗೆ ಜೈಲೇ ಗತಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಳಿಕ ಪೊಲಿಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದಾದ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ಸಿಗಲಿದೆ ಎಂಬ ಭರವಸೆ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಎಲ್ಲ ಆರೋಪಿಗಳು ಇಟ್ಟುಕೊಂಡಿದ್ದರು. ಆದರೆ ಅವರ ಆಸೆ ಹುಸಿಯಾಗಿದೆ. ನಟ ದರ್ಶನ್ ಮಾತ್ರವಲ್ಲದೇ ನಟಿ ಪವಿತ್ರಾ ಗೌಡರ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿದೆ.

ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅವರು ಆರೋಪಿಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಸಂಬಂಧ ಸಮಯಾವಕಾಶ ಬೇಕಿದೆ ಎಂದು ಕೋರ್ಟ್‌ಗೆ ಮನವಿ ಮಾಡಿಕೊಂಡರು. ಹೀಗಾಗಿ ಅವರ ಮನವಿ ಪುರಸ್ಕರಿಸಿದ ಕೋರ್ಟ್ ಪವಿತ್ರಾ ಗೌಡರ ಜಾಮೀನು ಅರ್ಜಿಯನ್ನು ಸೆಪ್ಟಂಬರ್ 25ಕ್ಕೆ ಮುಂದೂಡಿತು.
ಈ ಹಿಂದೊಮ್ಮೆ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂಬಂತೆ ಉಲ್ಲೇಖಿಸಿ ಜಾಮೀನು ಕೋಟಿ ಸಲ್ಲಿಸಿದ್ದ ನಟಿ ಪವಿತ್ರಾ ಗೌಡರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಇದಾಗಿ ಬಳಿಕ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಆಗಿತ್ತು. ಇದಾದ ಬಳಿಕ ನಟ ದರ್ಶನ್ ಸೇರಿದಂತೆ ಪವಿತ್ರಾ ಗೌಡ ಅವರು ಎರಡು ದಿನಗಳ ಹಿಂದೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ ಏನು?
ತನಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಅದನ್ನು ನಟಿ ಪವಿತ್ರಾ ಗೌಡ ಆ ವಿಷಯವನ್ನು ನಟ ದರ್ಶನ್‌ಗೆ ತಿಳಿಸಿದ್ದಾರೆ. ಚಿತ್ರದುರ್ಗದ ಫ್ಯಾನ್ಸ್ ಸಂಘದ ಅಧ್ಯಕ್ಷನ ರಘು ಸಹಾಯ ಪಡೆದು ದರ್ಶನ್ ಸಹಚರರು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಬಂದು ಶೆಡ್ ನಲ್ಲಿಟ್ಟು ಚಿತ್ರಹಿಂಸೆ ಕೊಟ್ಟಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಎಲೆಕ್ಟ್ರಿಕ್ ಶಾಕ್ ಕೊಟ್ಟು, ಲಾಠಿಯಿಂದ ಹಲ್ಲೆ ಮಾಡಲಾಗಿದೆ. ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರ ಹಲ್ಲೆಗೆ ಜೀವ ಬಿಟ್ಟ ರೇಣುಕಾಸ್ವಾಮಿ ಶವ ವಿಲೇವಾರಿ ಮಾಡಿ, ಮೂರು ಜನರನ್ನು ತಪ್ಪೊಪ್ಪಿಗೆ ಕಳುಹಿಸುವ ಮೂಲಕ ಕೃತ್ಯ ಮುಚ್ಚಿಡಲು ನಟ ದರ್ಶನ್ ಸೇರಿದಂತೆ 17 ಮಂದಿ ಯತ್ನಿಸಿದ್ದು ಬಯಲಾಗಿದೆ. ಸದ್ಯ ಆರೋಪಿಗಳು ಜೈಲಿನಲ್ಲಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಟ ದರ್ಶನ್‌ಗೆ ಜಾಮೀನು ಸಿಗುತ್ತಾ ಇಲ್ಲವಾ ಎಂದು ಕಾದು ನೋಡಬೇಕಿದೆ.












Click it and Unblock the Notifications